ADVERTISEMENT

ಬೆಳವಣಿಗೆ ಅಂದಾಜು ತಗ್ಗಿಸಿದ ಮೂಡಿಸ್

ಪಿಟಿಐ
Published 1 ಜೂನ್ 2021, 16:07 IST
Last Updated 1 ಜೂನ್ 2021, 16:07 IST

ನವದೆಹಲಿ: ‘ಭಾರತದ ಅರ್ಥ ವ್ಯವಸ್ಥೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಪುಟಿದೇಳಲಿದೆ. 2022ರ ಮಾರ್ಚ್‌ 31ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆಯು ಶೇಕಡ 9.3ರಷ್ಟು ಇರಲಿದೆ’ ಎಂದು ಮೂಡಿಸ್ ಇನ್ವೆಸ್ಟರ್ಸ್‌ ಸರ್ವಿಸ್ ಹೇಳಿದೆ.

ದೇಶದ ಜಿಡಿಪಿ ಬೆಳವಣಿಗೆ ಪ್ರಮಾಣ ಶೇ 13.7ರಷ್ಟು ಇರಲಿದೆ ಎಂದು ಸಂಸ್ಥೆಯು ಫೆಬ್ರುವರಿಯಲ್ಲಿ ಅಂದಾಜಿಸಿತ್ತು. ಆದರೆ, ಅಂದಾಜನ್ನು ಅದು ಈಗ ತಗ್ಗಿಸಿದೆ.

ಕೋವಿಡ್‌ ಸಾಂಕ್ರಾಮಿಕದ ಎರಡನೆಯ ಅಲೆಯ ತೀವ್ರತೆಯ ಕಾರಣದಿಂದಾಗಿ ದೇಶದ ಸಾಲ ಪಡೆಯುವ ಹಾಗೂ ತೀರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಅದು ಎಚ್ಚರಿಸಿದೆ.

ADVERTISEMENT

ಜೂನ್‌ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಚಟುವಟಿಕೆಗಳಲ್ಲಿ ಇಳಿಕೆ ಕಂಡುಬರಲಿದೆ. ಸ್ಥಳೀಯವಾಗಿ ಜಾರಿಗೆ ಬಂದಿರುವ ನಿರ್ಬಂಧಗಳು, ಜನರ ಧೋರಣೆಯಲ್ಲಿ ಆಗಿರುವ ಬದಲಾವಣೆ ಹಾಗೂ ಸಾಂಕ್ರಾಮಿಕದ ಬಗ್ಗೆ ಜನರಲ್ಲಿ ಮೂಡಿರುವ ಭಯ ಹೀಗೆ ಆಗಲು ಕಾರಣ ಎಂದು ಅದು ಬೊಟ್ಟು ಮಾಡಿದೆ.

ಜೂನ್‌ ತ್ರೈಮಾಸಿಕದ ನಂತರದಲ್ಲಿ ಆರ್ಥಿಕ ಚಟುವಟಿಕೆಗಳು ಚುರುಕಾಗಬಹುದು. 2021–22ರಲ್ಲಿ ಶೇ 9.3ರಷ್ಟು ಏರಿಕೆ ಹಾಗೂ 2022–23ರಲ್ಲಿ ಶೇ 7.9ರಷ್ಟು ಏರಿಕೆಯನ್ನು ದೇಶದ ಜಿಡಿಪಿ ಕಾಣಲಿದೆ ಎಂದು ಮೂಡಿಸ್ ಅಂದಾಜಿಸಿದೆ. ಆದರೆ, ಮುಂದೆ ಬರಬಹುದಾದ ಕೊರೊನಾ ಅಲೆಗಳು ಈ ಅಂದಾಜು ಪ್ರಮಾಣದಲ್ಲಿ ವ್ಯತ್ಯಾಸಕ್ಕೆ ಕಾರಣವಾಗಬಲ್ಲವು ಎಂದು ಅದು ಹೇಳಿದೆ.

‘ಎರಡನೆಯ ಅಲೆಯು ಜೂನ್‌ ನಂತರವೂ ಮುಂದುವರಿದಲ್ಲಿ, ಲಸಿಕೆ ನೀಡುವುದು ನಿರೀಕ್ಷೆಗಿಂತಲೂ ನಿಧಾನವಾಗಿ ನಡೆದರೆ ದೇಶದ ಅರ್ಥ ವ್ಯವಸ್ಥೆಯ ಮೇಲೆ ದೀರ್ಘಾವಧಿಯ ಪರಿಣಾಮಗಳು ಹೆಚ್ಚುತ್ತವೆ. ಉದ್ಯೋಗಗಳ ಸಂಖ್ಯೆಯು ಶಾಶ್ವತವಾಗಿ ಕಡಿಮೆ ಆದರೆ, ಉದ್ದಿಮೆಗಳು ಶಾಶ್ವತವಾಗಿ ಮುಚ್ಚಿದರೆ ಕೆಟ್ಟ ಪರಿಣಾಮ ಉಂಟಾಗುತ್ತದೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.