ADVERTISEMENT

Indian Exports to US: ಅಮೆರಿಕಕ್ಕೆ ಭಾರತದ ರಫ್ತು ಶೇ 20ರಷ್ಟು ಏರಿಕೆ

ಪಿಟಿಐ
Published 15 ಆಗಸ್ಟ್ 2025, 15:13 IST
Last Updated 15 ಆಗಸ್ಟ್ 2025, 15:13 IST
ಅಮೆರಿಕ–ಭಾರತ
ಅಮೆರಿಕ–ಭಾರತ   

ನವದೆಹಲಿ: ಜುಲೈ ತಿಂಗಳಿನಲ್ಲಿ ಅಮೆರಿಕಕ್ಕೆ ದೇಶದ ಸರಕುಗಳ ರಫ್ತು ಶೇ 20ರಷ್ಟು ಏರಿಕೆಯಾಗಿದೆ. ಇದರ ಒಟ್ಟು ಮೌಲ್ಯ ₹70,208 ಕೋಟಿಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.

ಇದೇ ಅವಧಿಯಲ್ಲಿ ಆಮದು ಶೇ 13ರಷ್ಟು ಹೆಚ್ಚಳವಾಗಿದ್ದು, ₹39,881 ಕೋಟಿಯಾಗಿದೆ ಎಂದು ತಿಳಿಸಿದೆ.

ಏಪ್ರಿಲ್–ಜುಲೈ ಅವಧಿಯಲ್ಲಿ ದೇಶದ ರಫ್ತು ಶೇ 21ರಷ್ಟು ಹೆಚ್ಚಳವಾಗಿದ್ದು, ₹2.93 ಲಕ್ಷ ಕೋಟಿಯಾಗಿದೆ. ಆಮದು ₹1.52 ಲಕ್ಷ ಕೋಟಿಯಾಗಿದ್ದು, ಶೇ 12ರಷ್ಟು ಏರಿಕೆಯಾಗಿದೆ. ಅಮೆರಿಕದ ದೇಶದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ₹1.10 ಲಕ್ಷ ಕೋಟಿ ದ್ವಿಪಕ್ಷೀಯ ವ್ಯಾಪಾರ ಹೊಂದಿದೆ. 

ADVERTISEMENT

ಏಪ್ರಿಲ್‌ನಿಂದ ಅಮೆರಿಕಕ್ಕೆ ದೇಶದ ರಫ್ತು ಸಕಾರಾತ್ಮಕ ಬೆಳವಣಿಗೆ ದಾಖಲಿಸಿದೆ. ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಬಗ್ಗೆ ಭಾರತ ಮತ್ತು ಅಮೆರಿಕ ಮಾತುಕತೆ ನಡೆಸುತ್ತಿವೆ. ಆಗಸ್ಟ್‌ 25ಕ್ಕೆ ಅಮೆರಿಕದ ತಂಡವು ಭಾರತಕ್ಕೆ ಭೇಟಿ ನೀಡಿ, ಒಪ್ಪಂದದ ಬಗ್ಗೆ ಮಾತುಕತೆ ನಡೆಸಲಿದೆ. 

ಚೀನಾಕ್ಕೆ ದೇಶದ ರಫ್ತು ಶೇ 27ರಷ್ಟು ಹೆಚ್ಚಳವಾಗಿದೆ. ಇದರ ಮೌಲ್ಯ ₹11,745 ಕೋಟಿಯಾಗಿದೆ. ಏಪ್ರಿಲ್‌–ಜುಲೈ ಅವಧಿಯಲ್ಲಿ ₹50,399 ಕೋಟಿಯಾಗಿದೆ. ಆಮದು ಶೇ 5ರಷ್ಟು ಏರಿಕೆಯಾಗಿದ್ದು, ₹95,627 ಕೋಟಿಯಾಗಿದೆ. ಜುಲೈವರೆಗೆ ಇದು ₹3.56 ಲಕ್ಷ ಕೋಟಿಯಷ್ಟಾಗಿದೆ ಎಂದು ತಿಳಿಸಿದೆ.

ಯುಎಇ, ಬ್ರಿಟನ್, ಜರ್ಮನಿ, ಬಾಂಗ್ಲಾದೇಶ, ಬ್ರೆಜಿಲ್ ಮತ್ತು ಇಟಲಿಗೆ ದೇಶದ ರಫ್ತು ಸಕಾರಾತ್ಮಕವಾಗಿದೆ. ನೆದರ್ಲೆಂಡ್ಸ್, ಸಿಂಗಪುರ, ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಫ್ರಾನ್ಸ್‌ಗೆ ರಫ್ತು ಇಳಿಕೆಯಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.