ADVERTISEMENT

ಆಗಸ್ಟ್‌ನಲ್ಲಿ ವೇಗದ ಬೆಳವಣಿಗೆ ಕಂಡ ಸೇವಾ ವಲಯ

14 ವರ್ಷಗಳ ಗರಿಷ್ಠ ಮಟ್ಟಕ್ಕೆ ನೇಮಕಾತಿ

ಏಜೆನ್ಸೀಸ್
Published 5 ಸೆಪ್ಟೆಂಬರ್ 2022, 14:02 IST
Last Updated 5 ಸೆಪ್ಟೆಂಬರ್ 2022, 14:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಯು ಆಗಸ್ಟ್‌ನಲ್ಲಿ ನಿರೀಕ್ಷೆಗೂ ಮೀರಿ ವೇಗದ ಬೆಳವಣಿಗೆ ಕಂಡಿದೆ ಎಂದು ಎಸ್‌ ಅ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆ ಹೇಳಿದೆ.

ಸೇವಾ ವಲಯದ ಚಟುವಟಿಕೆಗಳನ್ನು ತಿಳಿಸುವ ಸೂಚ್ಯಂಕವು ಜುಲೈನಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟವಾದ 55.5ಕ್ಕೆ ಇಳಿಕೆ ಕಂಡಿತ್ತು. ಆದರೆ ಆಗಸ್ಟ್‌ನಲ್ಲಿ 57.2ಕ್ಕೆ ಏರಿಕೆ ಕಂಡಿದೆ.

ಬೇಡಿಕೆ ಹೆಚ್ಚಾಗುತ್ತಿರುವುದರ ಜೊತೆಗೆ ಒಟ್ಟಾರೆಯಾಗಿ ವೆಚ್ಚದ ಒತ್ತಡವೂ ಕಡಿಮೆ ಆಗುತ್ತಿದೆ. ಇದರಿಂದಾಗಿ ಕಂಪನಿಗಳ ಹೊಸ ನೇಮಕಾತಿಯು 14 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಅದು ತಿಳಿಸಿದೆ.

ADVERTISEMENT

ಸೂಚ್ಯಂಕವು 50 ಮತ್ತು ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ. ಈ ದೃಷ್ಟಿಯಿಂದ ಸತತ 13ನೇ ತಿಂಗಳಿನಲ್ಲಿಯೂ ವಲಯವು ಸಕಾರಾತ್ಮಕ ಬೆಳವಣಿಗೆ ಕಂಡಂತಾಗಿದೆ.

ತಯಾರಿಕೆ ಮತ್ತು ಸೇವಾ ವಲಯಗಳ ಒಟ್ಟಾರೆ ಬೆಳವಣಿಗೆಯನ್ನು ಸೂಚಿಸುವ ಕಂಪೋಸಿಟ್‌ ಪಿಎಂಐ ಔಟ್‌ಪುಟ್‌ ಇಂಡೆಕ್ಸ್‌ 56.6ರ ರಿಂದ 58.2ಕ್ಕೆ ಏರಿಕೆ ಆಗಿದೆ. ಇದು ಒಂಬತ್ತು ತಿಂಗಳ ಗರಿಷ್ಠ ಮಟ್ಟವಾಗಿದೆ.

ಬಡ್ಡಿದರ ಗರಿಷ್ಠ ಮಟ್ಟದಲ್ಲಿ ಇರುವುದು, ಬೆಲೆ ಏರಿಕೆಯ ಒತ್ತಡ ಹಾಗೂ ಜಾಗತಿಕ ಮಂದಗತಿಯ ಆರ್ಥಿಕ ಬೆಳವಣಿಗೆಯ ಆತಂಕದಿಂದಾಗಿ ಮುಂಬರುವ ದಿನಗಳಲ್ಲಿ ಬೆಳವಣಿಗೆಯ ವೇಗದ ಮೇಲೆ ಪರಿಣಾಮ ಉಂಟಾಗಬಹುದು ಎಂದು ಸಂಸ್ಥೆಯು ಅಭಿಪ್ರಾಯಪಟ್ಟಿದೆ.

ಮುಖ್ಯಾಂಶಗಳು
*
2008ರ ಬಳಿಕ ನೇಮಕಾತಿಗೆ ವೇಗ
*ಸತತ 13ನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಬೆಳವಣಿಗೆ
*ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 30ನೇ ತಿಂಗಳಿನಲ್ಲಿಯೂ ಬೇಡಿಕೆ ಕುಸಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.