ADVERTISEMENT

ತಾಳೆ ಎಣ್ಣೆ ಆಮದು: ಆಗಸ್ಟ್‌ನಲ್ಲಿ 11 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ

ರಾಯಿಟರ್ಸ್
Published 5 ಸೆಪ್ಟೆಂಬರ್ 2022, 14:06 IST
Last Updated 5 ಸೆಪ್ಟೆಂಬರ್ 2022, 14:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಭಾರತವು ಆಗಸ್ಟ್‌ನಲ್ಲಿ 10.3 ಲಕ್ಷ ಟನ್‌ ತಾಳೆ ಎಣ್ಣೆ ಆಮದು ಮಾಡಿಕೊಂಡಿದ್ದು, 11 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ವಿತರಕರು ಹೇಳಿದ್ದಾರೆ. ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಆಮದು ಪ್ರಮಾಣವು ಶೇ 94ರಷ್ಟು ಏರಿಕೆ ಆಗಿದೆ.

ತಾಳೆ ಎಣ್ಣೆ ಬೆಲೆ ಇಳಿಕೆ ಆಗಿರುವುದರಿಂದ ಸಂಸ್ಕರಣೆ ಮಾಡುವ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಿವೆ. ಹೀಗಾಗಿ ಆಮದು ಹೆಚ್ಚಾಗಿದೆ ಎಂದು ವಿತರಕರು ಹೇಳಿದ್ದಾರೆ.

ಭಾರತಕ್ಕೆ ಸೆಪ್ಟೆಂಬರ್‌ ತಿಂಗಳಿನಲ್ಲಿ ಪೂರೈಸುವ ಕಚ್ಚಾ ತಾಳೆ ಎಣ್ಣೆಯನ್ನು ಪ್ರತಿ ಟನ್‌ಗೆ 1,011 ಡಾಲರ್‌ಗೆ ನೀಡಲಾಗುತ್ತಿದೆ. ಕಚ್ಚಾ ಸೋಯಾ ಎಣ್ಣೆ ದರವು ಪ್ರತಿ ಟನ್‌ಗೆ 1,443 ಡಾಲರ್‌ ಇದೆ ಎಂದು ವಿತರಕರು ತಿಳಿಸಿದ್ದಾರೆ.

ADVERTISEMENT

ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಆಮದಾಗಲಿರುವ ತಾಳೆ ಎಣ್ಣೆ ಪ್ರಮಾಣವು 10 ಲಕ್ಷ ಟನ್‌ಗಿಂತಲೂ ಹೆಚ್ಚಿಗೆ ಆಗಬಹುದು ಎಂದು ಸನ್‌ವಿನ್‌ ಸಮೂಹದ ಮುಖ್ಯ ಕಾರ್ಯನಿರ್ವಾಹಕ ಸಂದೀಪ್‌ ಬಜೋರಿಯಾ ಹೇಳಿದ್ದಾರೆ.

ಸುಂಕ ರಹಿತವಾಗಿ ಅಕ್ಟೋಬರ್‌ ಅಂತ್ಯದವರೆಗೆ ತಾಳೆ ಎಣ್ಣೆ ರಫ್ತು ಮಾಡಲು ಇಂಡೊನೇಷ್ಯಾ ನಿರ್ಧರಿಸಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಾಗಿದ್ದು, ಬೆಲೆಯಲ್ಲಿ ಇಳಿಕೆ ಕಾಣುವಂತಾಗಿದೆ ಎಂದು ಮುಂಬೈ ಮೂಲದ ವಿತರಕರೊಬ್ಬರು ತಿಳಿಸಿದ್ದಾರೆ.

ಏಪ್ರಿಲ್‌–ಮೇ ಅವಧಿಯಲ್ಲಿ ಇಂಡೊನೇಷ್ಯಾವು ರಫ್ತು ನಿರ್ಬಂಧಿಸಿತ್ತು. ಇದೀಗ ದಾಸ್ತಾನು ಕಡಿಮೆ ಮಾಡಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

ಸೋಯಾ ಎಣ್ಣೆ ಆಮದು ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಇಳಿಕೆ ಆಗಿದ್ದು 2.40 ಲಕ್ಷ ಟನ್‌ ಆಗಿದೆ. ಸೂರ್ಯಕಾಂತಿ ಎಣ್ಣೆ ಆಮದು ಶೇ 8ರಷ್ಟು ಇಳಿಕೆ ಕಂಡಿದ್ದು 1.43 ಲಕ್ಷ ಟನ್‌ಗೆ ತಲುಪಿದೆ ಎಂದು ವಿತರಕರು ಮಾಹಿತಿ ನೀಡಿದ್ದಾರೆ.

ಭಾರತವು ಇಂಡೊನೇಷ್ಯಾ, ಮಲೇಷ್ಯಾ ಮತ್ತು ಥಾಯ್ಲೆಂಡ್‌ನಿಂದ ತಾಳೆ ಎಣ್ಣೆ ಆಮದುಮಾಡಿಕೊಳ್ಳುತ್ತಿದೆ. ಅರ್ಜೆಂಟೀನಾ, ಬ್ರೆಜಿಲ್‌, ಉಕ್ರೇನ್‌ ಮತ್ತು ರಷ್ಯಾದಿಂದ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಗಳನ್ನು ಆಮದುಮಾಡಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.