ADVERTISEMENT

2 ವರ್ಷಗಳ ಕನಿಷ್ಠ ಮಟ್ಟಕ್ಕೆ ವಿದೇಶಿ ವಿನಿಮಯ ಸಂಗ್ರಹ

ರಾಯಿಟರ್ಸ್
Published 12 ಸೆಪ್ಟೆಂಬರ್ 2022, 13:20 IST
Last Updated 12 ಸೆಪ್ಟೆಂಬರ್ 2022, 13:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಭಾರತದ ವಿದೇಶಿ ವಿನಿಮಯ ಮೀಸಲು ಸಂಗ್ರಹವು 2020ರ ಅಕ್ಟೋಬರ್‌ ನಂತರದ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ, ಸೆಪ್ಟೆಂಬರ್‌ 2ಕ್ಕೆ ಕೊನೆಗೊಂಡ ವಾರದಲ್ಲಿ ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹ 44.02 ಲಕ್ಷ ಕೋಟಿಗೆ ಇಳಿಕೆ ಆಗಿದೆ.

ಆಗಸ್ಟ್‌ 26ಕ್ಕೆ ಕೊನೆಗೊಂಡ ವಾರಕ್ಕೆ ಹೋಲಿಸಿದರೆ ಸೆಪ್ಟೆಂಬರ್‌ 2ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ಸಂಗ್ರಹ ₹ 63,680 ಕೋಟಿಯಷ್ಟು ಕಡಿಮೆ ಆಗಿದೆ.

ADVERTISEMENT

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಮೌಲ್ಯ ಹೆಚ್ಚಾಗುತ್ತಿರುವುದರಿಂದ ಭಾರತದ ಕರೆನ್ಸಿಯ ಮೌಲ್ಯ ಕುಸಿಯುವುದನ್ನು ತಡೆಯಲು ಆರ್‌ಬಿಐ ಮಧ್ಯಪ್ರವೇಶ ಮಾಡಿರುವುದೇ ಮೀಸಲು ಸಂಗ್ರಹದಲ್ಲಿ ಭಾರಿ ಇಳಿಕೆಗೆ ಕಾರಣ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸೆಪ್ಟೆಂಬರ್ 2ಕ್ಕೆ ಕೊನೆಗೊಂಡ ವಾರದಲ್ಲಿ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ದಾಖಲೆಯ ಕನಿಷ್ಠ ಮಟ್ಟವಾದ ₹ 80.12ಕ್ಕೆ ಇಳಿಕೆ ಕಂಡಿತ್ತು. ಅಮೆರಿಕದ ಫೆಡರಲ್‌ ರಿಸರ್ವ್‌ ಹಣಕಾಸು ನೀತಿಯನ್ನು ಇನ್ನಷ್ಟು ಬಿಗಿಗೊಳಿಸಲಿದೆ ಎನ್ನುವ ನಿರೀಕ್ಷೆಯಿಂದಾಗಿ ರೂಪಾಯಿ ಮೌಲ್ಯವು ಈ ಪ್ರಮಾಣದ ಕುಸಿತ ಕಂಡಿತು.

ಮೀಸಲು ಸಂಗ್ರಹದಲ್ಲಿನ ಕುಸಿತಕ್ಕೆ ಆರ್‌ಬಿಐನ ಮಧ್ಯಪ್ರವೇಶ ಒಂದೇ ಕಾರಣ ಅಲ್ಲ. ಮಾರುಕಟ್ಟೆ ಮೌಲ್ಯ ಮತ್ತು ವಾಯಿದಾ ವಹಿವಾಟಿನ ಮೆಚ್ಯುರಿಟಿಯೂ ಪರಿಣಾಮ ಬೀರಿರುವ ಸಾಧ್ಯತೆ ಇದೆ ಎಂದು ಕ್ಯಾಂಟ್‌ಎಕೊ ರಿಸರ್ಚ್‌ನ ಆರ್ಥಿಕ ತಜ್ಞ ವಿವೇಕ್‌ ಕುಮಾರ್‌ ಹೇಳಿದ್ದಾರೆ.

ರೂಪಾಯಿ ಮೌಲ್ಯ ಕುಸಿತ ತಡೆಯಲು ಡಾಲರ್‌ ಖರೀದಿಸುವುದನ್ನು ಆರ್‌ಬಿಐ ಮುಂದುವರಿಸಲಿದೆ. ಸರಕುಗಳ ದರದ ಇಳಿಮುಖ ಚಲನೆ ಮುಂದುವರಿಯುವ ನಿರೀಕ್ಷೆ ಇದೆ. ಡಾಲರ್ ಮೌಲ್ಯ ಇನ್ನಷ್ಟು ಏರಿಕೆ ಆಗಲು ಹೆಚ್ಚುವರಿ ಕಾರಣಗಳು ಇರುವಂತೆ ಕಂಡುಬರುತ್ತಿಲ್ಲ ಎಂದು ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.