ADVERTISEMENT

ಲಾಕ್‌ಡೌನ್‌ ಪರಿಣಾಮ, ಜಿಡಿಪಿ ಶೇ 3ರಷ್ಟು ಕುಸಿತ ಸಾಧ್ಯತೆ: ಬಿಒಎಫ್‌ಎ

ಪಿಟಿಐ
Published 9 ಜುಲೈ 2020, 14:20 IST
Last Updated 9 ಜುಲೈ 2020, 14:20 IST
ಜಿಡಿಪಿ
ಜಿಡಿಪಿ   

ಮುಂಬೈ: ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) 2020–21ನೇ ಹಣಕಾಸು ವರ್ಷದಲ್ಲಿ ಶೇ 3ರಷ್ಟು ಕುಸಿತ ಕಾಣಲಿದೆ ಎಂದು ದಲ್ಲಾಳಿ ಸಂಸ್ಥೆ ಬಿಒಎಫ್‌ಎ ಸೆಕ್ಯುರಿಟೀಸ್ ಅಂದಾಜು ಮಾಡಿದೆ.

ಕೋವಿಡ್‌–19 ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಆರ್ಥಿಕ ಬೆಳವಣಿಗೆಯಲ್ಲಿ (ಜಿಡಿಪಿ) ಕುಸಿತ ಕಂಡು ಬರಲಿದೆ. ಮುಂದಿನ ತಿಂಗಳು ಆರ್ಥಿಕತೆ ಚಟುವಟಿಕೆಗಳು ಸಂಪೂರ್ಣವಾಗಿ ತೆರೆದುಕೊಳ್ಳಲಿವೆ ಎಂದು ಹೇಳಿದೆ.

ಆರ್‌ಬಿಐ ಸೇರಿದಂತೆ ಆರ್ಥಿಕ ತಜ್ಞರು ದೇಶದ ಜಿಡಿಪಿ ಬೆಳವಣಿಗೆಯನ್ನು ತಗ್ಗಿಸುತ್ತಿದ್ದಾರೆ. ಶೇ 7ರವರೆಗೂ ನಕಾರಾತ್ಮಕ ಬೆಳವಣಿಗೆ ಹೊಂದುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ADVERTISEMENT

ಮುಕ್ತ ಮಾರುಕಟ್ಟೆಯಲ್ಲಿ ₹ 7.12 ಲಕ್ಷ ಕೋಟಿ ಮೌಲ್ಯದ ಸರ್ಕಾರಿ ಬಾಂಡ್‌ಗಳನ್ನು ಖರೀದಿಸುವ ಮೂಲಕ ವಿತ್ತೀಯ ಕೊರತೆ ನಿಯಂತ್ರಿಸಲು ಆರ್‌ಬಿಐ ಪ್ರಯತ್ನಿಸಲಿದೆ ಎಂದು ಹೇಳಿದೆ.

ಆರೋಗ್ಯ ತುರ್ತು ಪರಿಸ್ಥಿತಿಯನ್ನು ಯಾರೂ ಅಂದಾಜು ಮಾಡಲು ಸಾಧ್ಯವಿಲ್ಲ. ಏಪ್ರಿಲ್‌ ಮತ್ತು ಮೇನಲ್ಲಿ ಕಠಿಣವಾದ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ವಾರ್ಷಿಕ ಜಿಡಿಪಿ ಬೆಳವಣಿಗೆಗೆ ಶೇ 3ರಷ್ಟು ಹೊಡೆತ ಬೀಳಲಿದೆ. ಇದೀಗ ನಿಧಾನವಾಗಿ ನಿರ್ಬಂಧಗಳನ್ನು ಸಡಿಲಿಸುತ್ತಿರುವುದರಿಂದ ಪ್ರತಿ ತಿಂಗಳೂ ಜಿಡಿಪಿ ಮೇಲೆ ಆಗಲಿರುವ ಪರಿಣಾಮವು ಶೇ 1ಕ್ಕೆ ಇಳಿಕೆಯಾಗಿದೆ ಎಂದು ಆರ್ಥಿಕ ತಜ್ಞ ಇಂದ್ರನಿಲ್‌ ಸೇನ್‌ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ವಿನಿಮಯ ಸಂಗ್ರಹವೇ ಬಲ: ಭಾರತಕ್ಕೆ ಸದ್ಯ ಇರುವ ಅತಿ ದೊಡ್ಡ ಬಲವೇ ವಿದೇಶಿ ವಿನಿಮಯ ಮೀಸಲು ಸಂಗ್ರಹ. ಸದ್ಯ ₹37.50 ಲಕ್ಷ ಕೋಟಿ ಇದೆ.

ಗ್ರಾಮೀಣ ಪ್ರದೇಶದ ಮೇಲೆ ಕೋವಿಡ್‌ ತೀವ್ರತೆ ತುಸು ಕಡಿಮೆ ಇದೆ. ಇದರ ಜತೆಗೆ ಉತ್ತಮ ಮುಂಗಾರಿನಿಂದಾಗಿ ಮುಂಗಾರು ಹಂಗಾಮು ಬಿತ್ತನೆ ಸಹಜವಾಗಿರುವ ನಿರೀಕ್ಷೆ ಮಾಡಲಾಗಿದೆ. ಒಟ್ಟಾರೆಯಾಗಿ ಕೃಷಿ, ಅರಣ್ಯ ಮತ್ತು ಮೀನುಗಾರಿಕಾ ವಲಯಗಳು ಶೇ 3.5ರಷ್ಟು ಪ್ರಗತಿ ಕಾಣುವ ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.