ಮುಂಬೈ: ದೇಶದ ಖಾಸಗಿ ವಲಯದ ಎರಡನೆಯ ಅತಿದೊಡ್ಡ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್‌ನ ಜೂನ್ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇಕಡ 15.5ರಷ್ಟು ಹೆಚ್ಚಳ ಆಗಿದೆ. ಇದು ಮಾರುಕಟ್ಟೆ ತಜ್ಞರ ಅಂದಾಜಿಗಿಂತ ಹೆಚ್ಚು.
ಸಾಲ ನೀಡಿಕೆಯು ಆರೋಗ್ಯಕರ ಮಟ್ಟದಲ್ಲಿ ಹೆಚ್ಚಳ ಕಂಡಿರುವುದು ಹಾಗೂ ಅದರ ಪರಿಣಾಮವಾಗಿ ಸಾಲ ನೀಡಿಕೆಯಿಂದ ಬರುವ ವರಮಾನವು ಹೆಚ್ಚಳ ಕಂಡಿರುವುದು ಲಾಭದ ಏರಿಕೆಗೆ ನೆರವಾಗಿದೆ.
ಬ್ಯಾಂಕ್‌ನ ನಿವ್ವಳ ಲಾಭವು ಜೂನ್ ತ್ರೈಮಾಸಿಕದಲ್ಲಿ ₹12,768 ಕೋಟಿಗೆ ತಲುಪಿದೆ. ಇದು ಮಾರುಕಟ್ಟೆ ತಜ್ಞರ ನಿರೀಕ್ಷೆಯಾಗಿದ್ದ ₹12,024 ಕೋಟಿಗಿಂತ ಹೆಚ್ಚು. ಬ್ಯಾಂಕ್‌ನ ನಿವ್ವಳ ಬಡ್ಡಿ ವರಮಾನವು ಶೇ 10.6ರಷ್ಟು ಹೆಚ್ಚಾಗಿದ್ದು, ₹21,635 ಕೋಟಿಗೆ ತಲುಪಿದೆ.
ಬ್ಯಾಂಕಿಂಗ್ ಉದ್ಯಮದಾದ್ಯಂತ ಸಾಲ ನೀಡಿಕೆಯಲ್ಲಿನ ಹೆಚ್ಚಳ ಪ್ರಮಾಣವು ಮಂದಗತಿಗೆ ತಿರುಗಿದ್ದರೂ ಐಸಿಐಸಿಐ ಬ್ಯಾಂಕ್‌ನ ಸಾಲ ನೀಡಿಕೆ ಪ್ರಮಾಣದಲ್ಲಿ ಶೇ 12ರಷ್ಟು ಹೆಚ್ಚಳ ದಾಖಲಾಗಿದೆ. ಉದ್ದಿಮೆಗಳಿಗೆ ನೀಡುವ ಸಾಲಗಳ ಪ್ರಮಾಣದಲ್ಲಿ ಶೇ 29.7ರಷ್ಟು ಹೆಚ್ಚಳ ಆಗಿರುವುದು ಇದಕ್ಕೆ ಮುಖ್ಯ ಕಾರಣ.
ಬ್ಯಾಂಕಿನ ವಸೂಲಾಗದ ಸಾಲಗಳ ಪ್ರಮಾಣದಲ್ಲಿ ಸುಧಾರಣೆ ಕಂಡುಬಂದಿದೆ. ಒಟ್ಟು ಎನ್‌ಪಿಎ ಪ್ರಮಾಣವು ಹಿಂದಿನ ವರ್ಷದ ಜೂನ್ ತ್ರೈಮಾಸಿಕದಲ್ಲಿ ಶೇ 2.15ರಷ್ಟು ಇದ್ದಿದ್ದು ಈ ಬಾರಿ ಶೇ 1.67ಕ್ಕೆ ಇಳಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.