ADVERTISEMENT

ಕೈಗಾರಿಕಾ ಉತ್ಪಾದನೆ ಕುಸಿತ: ಎಂಟು ವರ್ಷಗಳಲ್ಲಿನ ಕಳಪೆ ಸಾಧನೆ

ಪಿಟಿಐ
Published 11 ನವೆಂಬರ್ 2019, 19:41 IST
Last Updated 11 ನವೆಂಬರ್ 2019, 19:41 IST
   

ನವದೆಹಲಿ: ಕಾರ್ಖಾನೆಗಳ ಉತ್ಪಾದನೆಯು ಸೆಪ್ಟೆಂಬರ್‌ ತಿಂಗಳಲ್ಲಿ ಶೇ 4.3ರಷ್ಟು ಕುಸಿತ ದಾಖಲಿಸಿದ್ದು, ದೇಶಿ ಆರ್ಥಿಕತೆಯ ಕಳಪೆ ಸಾಧನೆ ಮುಂದುವರೆದಿರುವುದನ್ನು ಇದು ಸೂಚಿಸುತ್ತದೆ.

ತಯಾರಿಕೆ, ಗಣಿಗಾರಿಕೆ ಮತ್ತು ವಿದ್ಯುತ್‌ ಉತ್ಪಾದನಾ ವಲಯದಲ್ಲಿನ ಉತ್ಪಾದನೆಯು ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ. 2011ರ ಅಕ್ಟೋಬರ್‌ನಲ್ಲಿ ಶೇ 5ರಷ್ಟು ಕುಸಿತ ಕಂಡಿದ್ದ ಕೈಗಾರಿಕಾ ಉತ್ಪಾದನಾ ಸೂಚ್ಯಂಕವು (ಐಐಪಿ), ಈಗ ಸತತ ಎರಡನೇ ತಿಂಗಳೂ ಕುಸಿತ ದಾಖಲಿಸಿದೆ. ಎಂಟು ವರ್ಷಗಳಲ್ಲಿನ ಅತ್ಯಂತ ಕಳಪೆ ಪ್ರದರ್ಶನ ದಾಖಲಿಸಿದೆ. ಭಾರಿ ಯಂತ್ರೋಪಕರಣ, ಗೃಹೋಪಯೋಗಿ ಸಲಕರಣೆ, ಮೂಲಸೌಕರ್ಯ ಮತ್ತು ನಿರ್ಮಾಣ ವಲಯದ ಸರಕುಗಳ ತಯಾರಿಕೆಯು ಕುಸಿದಿದೆ.

ತಯಾರಿಕಾ ವಲಯದಲ್ಲಿನ ಕುಸಿತವು ಶೇ 3.9ರಷ್ಟಾಗಿದೆ. ವರ್ಷದ ಹಿಂದೆ ಇದು ಶೇ 4.8ರಷ್ಟು ಏರಿಕೆ ಕಂಡಿತ್ತು. ಬಂಡವಾಳ ಹೂಡಿಕೆಯ ಮಾನದಂಡವಾಗಿರುವ ಭಾರಿ ಯಂತ್ರೋಪಕರಣಗಳ ತಯಾರಿಕೆಯು ವರ್ಷದ ಹಿಂದಿನ ಶೇ 6.9 ಪ್ರಗತಿಗೆ ಹೋಲಿಸಿದರೆ ಈ ಬಾರಿ ಶೇ 20.7ರಷ್ಟು ಕುಸಿತ ದಾಖಲಿಸಿದೆ. ತಯಾರಿಕಾ ಕ್ಷೇತ್ರದಲ್ಲಿನ 23 ಕೈಗಾರಿಕಾ ವಲಯಗಳ ಪೈಕಿ 17 ವಲಯಗಳು ನಕಾರಾತ್ಮಕ ಪ್ರಗತಿ ಪ್ರದರ್ಶಿಸಿವೆ. ವಾಹನ ತಯಾರಿಕೆಯ ಕೈಗಾರಿಕಾ ಸಮೂಹವು ಗರಿಷ್ಠ ಮಟ್ಟದ ನಕಾರಾತ್ಮಕ ಪ್ರಗತಿ (–) ಶೇ 24.8 ಕಂಡಿದೆ.

ADVERTISEMENT

ಕೇಂದ್ರೀಯ ಸಾಂಖ್ಯಿಕ ಕಚೇರಿಯು (ಸಿಎಸ್‌ಒ) ಸೋಮವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಶೇ 4.3 ಕುಸಿತವು ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) 2011–12ರ ಸರಣಿಯಲ್ಲಿನ ಅತಿ ಕಡಿಮೆ ಮಟ್ಟವಾಗಿದೆ. 2012ರ ಏಪ್ರಿಲ್‌ ತಿಂಗಳಲ್ಲಿ ‘ಐಐಪಿ’ಯು ಶೇ 0.7ರಷ್ಟು ಕುಸಿತ ಕಂಡಿತ್ತು.

ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ಅಳೆಯಲಾಗುವ ಕಾರ್ಖಾನೆಗಳ ಉತ್ಪಾದನೆಯು 2018ರ ಸೆಪ್ಟೆಂಬರ್‌ ತಿಂಗಳಲ್ಲಿ ಶೇ 4.6ರಷ್ಟು ಏರಿಕೆ ದಾಖಲಿಸಿತ್ತು. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿನ ‘ಐಐಪಿ’ ಪ್ರಗತಿಯು ಹಿಂದಿನ ವರ್ಷದ ಇದೇ ಅವಧಿಯಲ್ಲಿನ ಶೇ 5.2ಕ್ಕೆ ಹೋಲಿಸಿದರೆ ಶೇ 1.3ರಷ್ಟು ದಾಖಲಾಗಿದೆ. ಆಗಸ್ಟ್‌ ತಿಂಗಳ ‘ಐಐಪಿ’ಯನ್ನು ಶೇ 1.1 ರಿಂದ ಶೇ 1.4ರಷ್ಟಕ್ಕೆ ಕೆಳಮುಖವಾಗಿ ಪರಿಷ್ಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.