ಬೆಂಗಳೂರು: ವಿದೇಶಿ ಹೊರಗುತ್ತಿಗೆ ಸೇವೆಗಳನ್ನು ಪಡೆದುಕೊಳ್ಳುವ ಅಮೆರಿಕದ ಕಂಪನಿಗಳ ಮೇಲೆ ಶೇಕಡ 25ರಷ್ಟು ತೆರಿಗೆ ವಿಧಿಸುವ ಬಗ್ಗೆ ಅಮೆರಿಕ ಚಿಂತನೆ ನಡೆಸಿದೆ. ಭಾರತದ ಐ.ಟಿ. ಸೇವಾ ವಲಯವು ದೀರ್ಘ ಅವಧಿಯ ಅನಿಶ್ಚಿತತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಅಮೆರಿಕದಲ್ಲಿ ಈ ಚಿಂತನೆ ಶುರುವಾಗಿದೆ. ಐ.ಟಿ. ಸೇವೆಗಳ ಗ್ರಾಹಕರು ಗುತ್ತಿಗೆ ತೀರ್ಮಾನವನ್ನು ಅಂತಿಮಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ.
ಹೊರಗುತ್ತಿಗೆ ಸೇವೆ ಪಡೆದುಕೊಳ್ಳುವ ಅಮೆರಿಕದ ಕಂಪನಿಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಅಮೆರಿಕದಲ್ಲಿ ಸಿದ್ಧಪಡಿಸಲಾಗಿದೆ. ಆದರೆ ಈ ಮಸೂದೆಗೆ ಅನುಮೋದನೆ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ವಿದೇಶಗಳ ಐ.ಟಿ. ಸೇವೆಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿರುವ ಅಮೆರಿಕದ ಕಂಪನಿಗಳು ಈ ಮಸೂದೆಯ ವಿರುದ್ಧ ತೀವ್ರ ಪ್ರಮಾಣದಲ್ಲಿ ಲಾಬಿ ನಡೆಸುವ ಸಾಧ್ಯತೆ ಇದೆ ಎಂದು ತಜ್ಞರು ನಿರೀಕ್ಷಿಸಿದ್ದಾರೆ.
ಭಾರತದ ಐ.ಟಿ. ಸೇವಾ ವಲಯಕ್ಕೆ ಆ್ಯಪಲ್, ಅಮೆರಿಕನ್ ಎಕ್ಸ್‌ಪ್ರೆಸ್, ಸಿಸ್ಕೊ, ಸಿಟಿಗ್ರೂಪ್, ಫೆಡೆಎಕ್ಸ್‌ನಂತಹ ಕಂಪನಿಗಳು ದೊಡ್ಡ ಗ್ರಾಹಕರು.
‘ಮಸೂದೆಯು ಬಹಳಷ್ಟು ಬದಲಾವಣೆಗಳನ್ನು ತರುವ ಪ್ರಸ್ತಾವ ಹೊಂದಿದೆ. ಹೊರಗುತ್ತಿಗೆಯ ಹಿಂದಿರುವ ಲೆಕ್ಕಾಚಾರಗಳನ್ನು ಇದು ಬದಲಿಸಬಲ್ಲದು. ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ಗುತ್ತಿಗೆ ಆಧಾರದಲ್ಲಿ ಸೇವೆಗಳನ್ನು ಪಡೆಯುವುದರ ಮೇಲಿನ ತೆರಿಗೆ ಹೊರೆಯನ್ನು ಇದು ಗಣನೀಯವಾಗಿ ಹೆಚ್ಚಿಸಬಲ್ಲದು’ ಎಂದು ಇ.ವೈ. ಇಂಡಿಯಾ ಸಂಸ್ಥೆಯ ಹಿರಿಯ ಅಧಿಕಾರಿ ಜಿಗ್ನೇಶ್ ಥಕ್ಕರ್ ಹೇಳಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಹೊರಗುತ್ತಿಗೆ ಮೇಲಿನ ಒಟ್ಟು ತೆರಿಗೆ ಪ್ರಮಾಣವು ಶೇ 60ರವರೆಗೂ ತಲುಪಬಹುದು ಎಂದು ಥಕ್ಕರ್ ಹೇಳಿದ್ದಾರೆ. ಆದರೆ, ಈ ಮಸೂದೆಯು ಅಂಗೀಕಾರ ಪಡೆದುಕೊಂಡರೆ ಅದನ್ನು ಕಂಪನಿಗಳು ಕಾನೂನಿನ ಚೌಕಟ್ಟಿನಲ್ಲಿ ಪ‍್ರಶ್ನಿಸುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.
‘ಇಂತಹ ಮಸೂದೆಗೆ ಹೊರಗುತ್ತಿಗೆಯ ಮೇಲೆ ಹೆಚ್ಚು ಅವಲಂಬನೆ ಹೊಂದಿರುವ ಅಮೆರಿಕದ ಕಂಪನಿಗಳಿಂದಲೇ ಹೆಚ್ಚಿನ ವಿರೋಧ ವ್ಯಕ್ತವಾಗಬಹುದು’ ಎಂದು ಅಮೆರಿಕದ ಆಲ್‌ಕಾನ್ ಇಮಿಗ್ರೇಷನ್ ಲಾ ಕಂಪನಿಯ ಸಿಇಒ ಸೊಫಿ ಆಲ್‌ಕಾನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.