ADVERTISEMENT

ಕಾರು ಮಾರಾಟ ಚೇತರಿಕೆಗೆ ಬೇಕಿದೆ ಎರಡು ವರ್ಷ: ಮಹೀಂದ್ರ

ರಾಯಿಟರ್ಸ್
Published 29 ಮೇ 2021, 13:57 IST
Last Updated 29 ಮೇ 2021, 13:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕಾರು ಮಾರಾಟವು ಕೋವಿಡ್‌ ಸಾಂಕ್ರಾಮಿಕಕ್ಕೂ ಮೊದಲಿನ ಗರಿಷ್ಠ ಮಟ್ಟ ತಲುಪಲು ಇನ್ನೆರಡು ವರ್ಷ ಬೇಕಾಗಲಿದೆ ಎಂದು ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಅನಿಶ್‌ ಶಾ ಹೇಳಿದ್ದಾರೆ.

ದೇಶದ ಬಹುಪಾಲು ಜನರಿಗೆ ಕೋವಿಡ್‌ ಲಸಿಕೆ ನೀಡಿದರೆ ಹಾಗೂ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆ ಆದರೆ ಆರ್ಥಿಕ ಚೇತರಿಕೆಗೆ ನೆರವಾಗಲಿದೆ. ಆಗ, 2023ರಲ್ಲಿ ಕಾರು ಮಾರಾಟದಲ್ಲಿ ಚೇತರಿಕೆ ಕಾಣಬಹುದು. ಲಸಿಕೆ ನೀಡುವಿಕೆಯಲ್ಲಿ ವಿಳಂಬವಾದರೆ ಚೇತರಿಕೆಗೆ ಏಟು ಬೀಳುವ ಸಾಧ್ಯತೆ ಇದೆ ಎಂದೂ ಅವರು ತಿಳಿಸಿದ್ದಾರೆ.

2019ರಲ್ಲಿನ ಮಂದಗತಿಯ ಆರ್ಥಿಕತೆ ಮತ್ತು 2020ರಲ್ಲಿ ಕೋವಿಡ್‌ ಸಾಂಕ್ರಾಮಿಕದ ಪರಿಣಾಮಗಳಿಂದಾಗಿ ಭಾರತದಲ್ಲಿ ಪ್ರಯಾಣಿಕ ವಾಹನ ಮಾರಾಟವು ಕಳೆದ ಹಣಕಾಸು ವರ್ಷದಲ್ಲಿ 27 ಲಕ್ಷಕ್ಕೆ ಇಳಿಕೆ ಕಂಡಿತು. ಇದು ಆರು ವರ್ಷಗಳ ಕನಿಷ್ಠ ಮಟ್ಟವಾಗಿದೆ.

ADVERTISEMENT

ಕೋವಿಡ್‌ ಬಿಕ್ಕಟ್ಟು ಬಗೆಹರಿಯುವವರೆಗೂ ನಗರ ಮತ್ತು ಗ್ರಾಮೀಣ ಭಾಗದ ಜನ ಖರೀದಿಗೆ ಮುಂದಾಗುವುದಿಲ್ಲ. ಕುಟುಂಬದಲ್ಲಿ ಯಾರಾದರೂ ಒಬ್ಬರಿಗೆ ಕೋವಿಡ್‌ ಬಂದರೆ ಏನು ಮಾಡುವುದು ಎನ್ನುವ ಆತಂಕದಿಂದಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.