
ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆ (ಐಐಪಿ) ಪ್ರಮಾಣವು ಜನವರಿಯಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಆಗಿದ್ದು, ಶೇ 4.8ರಷ್ಟು ದಾಖಲಾಗಿದೆ. 2025ರ ಜನವರಿಯಲ್ಲಿ ಇದು ಶೇ 5.2ರಷ್ಟಿತ್ತು.
ಗಣಿಗಾರಿಕೆ ಮತ್ತು ತಯಾರಿಕಾ ವಲಯಗಳಲ್ಲಿನ ಉತ್ಪಾದನೆ ಇಳಿಕೆ ಆಗಿರುವುದೇ ಐಐಪಿ ಬೆಳವಣಿಗೆ ನಿಧಾನವಾಗಲು ಕಾರಣ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಸೋಮವಾರ ತಿಳಿಸಿದೆ.
ಕಳೆದ ವರ್ಷದ ಜನವರಿಯಲ್ಲಿ ತಯಾರಿಕಾ ವಲಯದ ಉತ್ಪಾದನೆಯು ಶೇ 5.8ರಷ್ಟಿತ್ತು. ಇದು ಈ ಜನವರಿಯಲ್ಲಿ ಶೇ 4.8ಕ್ಕೆ ಇಳಿದಿದೆ. ಗಣಿಗಾರಿಕೆ ವಲಯದಲ್ಲಿನ ಉತ್ಪಾದನೆಯು ಶೇ 4.4ರಿಂದ ಶೇ 4.3ಕ್ಕೆ ಇಳಿದಿದೆ. ವಿದ್ಯುತ್ ವಲಯದ ಬೆಳವಣಿಗೆ ಶೇ 2.4ರಿಂದ ಶೇ 5.1ಕ್ಕೆ ಹೆಚ್ಚಳವಾಗಿದೆ.
ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜನವರಿವರೆಗೆ ದೇಶದ ಕೈಗಾರಿಕಾ ವಲಯದ ಉತ್ಪಾದನೆ ಶೇ 4ಕ್ಕೆ ಇಳಿದಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಇದು ಶೇ 4.2ರಷ್ಟಿತ್ತು ಎಂದು ತಿಳಿಸಿದೆ.
ತಯಾರಿಕಾ ವಲಯ ಚಟುವಟಿಕೆ ಏರಿಕೆ: ದೇಶದ ತಯಾರಿಕಾ ವಲಯದ ಚಟುವಟಿಕೆ ಫೆಬ್ರುವರಿ ತಿಂಗಳಿನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ಸಮೀಕ್ಷಾ ವರದಿ ಸೋಮವಾರ ತಿಳಿಸಿದೆ.
ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯು ನಿರ್ವಹಿಸುವ ‘ಎಚ್‌ಎಸ್‌ಬಿಸಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕ’ವು (ಪಿಎಂಐ) ಜನವರಿಯಲ್ಲಿ 55.4ರಷ್ಟಿತ್ತು. ಫೆಬ್ರುವರಿಯಲ್ಲಿ ಅದು 56.9ಕ್ಕೆ ಏರಿಕೆ ಆಗಿದೆ ಎಂದು ಹೇಳಿದೆ.
ಈ ಸೂಚ್ಯಂಕವು 50ರ ಮೇಲಿದ್ದರೆ ಸಕಾರಾತ್ಮಕ ಬೆಳವಣಿಗೆ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಅದನ್ನು ಕುಸಿತವೆಂದು ಕಾಣಲಾಗುತ್ತದೆ.
‘ದೇಶೀಯವಾಗಿ ಸರಕುಗಳಿಗೆ ಬೇಡಿಕೆ ಹೆಚ್ಚಳವಾಗಿದೆ. ಇದು ತಯಾರಿಕಾ ವಲಯದ ಚಟುವಟಿಕೆ ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಾಂಜುಲ್ ಭಂಡಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.