ADVERTISEMENT

ನವೆಂಬರ್‌ನಲ್ಲಿ ತಯಾರಿಕಾ ವಲಯದ ಚಟುವಟಿಕೆ ಹೆಚ್ಚಳ

ತಯಾರಿಕೆ ಮತ್ತು ಮಾರಾಟದಲ್ಲಿ ಹೆಚ್ಚಳ: ಐಎಚ್‌ಎಸ್‌ ಮರ್ಕಿಟ್‌ ವರದಿ

ಪಿಟಿಐ
Published 1 ಡಿಸೆಂಬರ್ 2021, 11:37 IST
Last Updated 1 ಡಿಸೆಂಬರ್ 2021, 11:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆಗಳು ನವೆಂಬರ್‌ನಲ್ಲಿ ಉತ್ತಮ ಬೆಳವಣಿಗೆ ಕಂಡಿವೆ ಎಂದು ಐಎಚ್‌ಎಸ್‌ ಮರ್ಕಿಟ್ ಇಂಡಿಯಾ ಸಂಸ್ಥೆಯು ಹೇಳಿದೆ. ಮ್ಯಾನುಫ್ಯಾಕ್ಚರಿಂಗ್‌ ಫರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಅಕ್ಟೋಬರ್‌ನಲ್ಲಿ 55.9ರಷ್ಟು ಇದ್ದಿದ್ದು ನವೆಂಬರ್‌ನಲ್ಲಿ 57.6ಕ್ಕೆ ಏರಿಕೆ ಆಗಿದೆ.

ಮಾರುಕಟ್ಟೆ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತಿರುವುದರಿಂದ ಕಳೆದ ಫೆಬ್ರುವರಿಯಿಂದಲೂ ತಯಾರಿಕೆ ಮತ್ತು ಮಾರಾಟವು ಹೆಚ್ಚಾಗುತ್ತಲೇ ಇದೆ. ಈ ವರ್ಷದ ನವಂಬರ್‌ನಲ್ಲಿ ಸೂಚ್ಯಂಕ ಕಂಡಿರುವ ಏರಿಕೆಯು ದೀರ್ಘಾವಧಿಯ ಸರಾಸರಿ ಮಟ್ಟವನ್ನು ಮೀರಿದೆ ಎಂದು ಅದು ಹೇಳಿದೆ.

ನೇಮಕಾತಿ ಚಟುವಟಿಕೆಯಲ್ಲಿಯೂ ಸುಧಾರಣೆ ಆಗುತ್ತಿದೆ ಎನ್ನುವ ಸೂಚನೆಯನ್ನು ನವೆಂಬರ್‌ ತಿಂಗಳ ತಯಾರಿಕಾ ವಲಯದ ಬೆಳವಣಿಗೆಯು ನೀಡಿದೆ.

ADVERTISEMENT

‘ತಯಾರಿಕಾ ಉದ್ಯಮದ ಬೆಳವಣಿಗೆಯು ನವೆಂಬರ್‌ನಲ್ಲಿ ಇನ್ನಷ್ಟು ಹೆಚ್ಚಾಗಿದೆ. ಮುಂಬರುವ ತಿಂಗಳುಗಳಲ್ಲಿ ಬೆಳವಣಿಗೆಯು ಇನ್ನೂ ಹೆಚ್ಚಿನ ಮಟ್ಟದಲ್ಲಿ ಇರುವ ನಿರೀಕ್ಷೆ’ ಇದೆ ಎಂದು ಐಎಚ್‌ಎಸ್‌ ಮರ್ಕಿಟ್‌ನಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ.ಲಿಮಾ ಹೇಳಿದ್ದಾರೆ.

ಕೋವಿಡ್‌ನ ಹೊಸ ತಳಿ ಮತ್ತು ಹಣದುಬ್ಬರದ ಒತ್ತಡವು ಈ ವಲಯದ ಮುಂಬರುವ ತಿಂಗಳುಗಳಲ್ಲಿನ ಬೆಳವಣಿಗೆಗೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಹಣದುಬ್ಬರದ ಒತ್ತಡವು ಬೇಡಿಕೆ ಮತ್ತು ತಯಾರಿಕೆಯ ಮೇಲೆ ಪರಿಣಾಮ ಬೀರಬಹುದು ಎನ್ನುವುದು ಉದ್ಯಮದ ಆತಂಕವಾಗಿದೆ. ವಹಿವಾಟು ನಡೆಸುವ ವಿಶ್ವಾಸವು ಒಂದೂವರೆ ವರ್ಷದಿಂದ ಕನಿಷ್ಠ ಮಟ್ಟದಲ್ಲಿ ಇದೆ ಎಂದು ಲಿಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.