ಮುಂಬೈ (ಪಿಟಿಐ): ದೇಶದ ತಯಾರಿಕಾ ವಲಯದ ಬೆಳವಣಿಗೆಯು ಜುಲೈನಲ್ಲಿ 16 ತಿಂಗಳ ಗರಿಷ್ಠ ಮಟ್ಟಕ್ಕೆ ದಾಖಲಾಗಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ಸಮೀಕ್ಷಾ ವರದಿಯು ಶುಕ್ರವಾರ ತಿಳಿಸಿದೆ.
ಸೂಚ್ಯಂಕವು ಜೂನ್‌ನಲ್ಲಿ 58.4 ಇದ್ದಿದ್ದು, ಜುಲೈನಲ್ಲಿ 59.1ಕ್ಕೆ ಹೆಚ್ಚಳ ಕಂಡಿದೆ ಎಂದು ತಿಳಿಸಿದೆ.
ಪಿಎಂಐ ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು ಗುರುತಿಸಲಾಗುತ್ತದೆ.
‘ಜುಲೈನಲ್ಲಿ ದೇಶದ ತಯಾರಿಕಾ ವಲಯದ ಪ್ರಗತಿ 59.1 ದಾಖಲಾಗಿದೆ. ಹೊಸ ಆರ್ಡರ್‌ಗಳಿಂದಾಗಿ ಬೇಡಿಕೆ ಹೆಚ್ಚಿದೆ ಮತ್ತು ತಯಾರಿಕೆಯಲ್ಲಿ ತ್ವರಿತ ಏರಿಕೆಯಾಗಿದೆ. ಇದು ಸೂಚ್ಯಂಕ ಏರಿಕೆಗೆ ಕಾರಣವಾಗಿವೆ’ ಎಂದು ಎಚ್‌ಎಸ್‌ಬಿಸಿಯ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಾಂಜುಳ್ ಭಂಡಾರಿ ಹೇಳಿದ್ದಾರೆ.
ಸಮೀಕ್ಷೆ ಪ‍್ರಕಾರ, ಒಟ್ಟಾರೆ ಮಾರಾಟವು ಐದು ವರ್ಷದಲ್ಲಿ ಹೆಚ್ಚಳವಾಗಿದೆ. ಇದೇ ವೇಳೆ ತಯಾರಿಕೆಯು 15 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಮುಂಬರುವ 12 ತಿಂಗಳಿನಲ್ಲಿ ಉತ್ಪಾದನೆ ಹೆಚ್ಚಳವಾಗುವ ನಿರೀಕ್ಷೆಯನ್ನು ದೇಶದ ತಯಾರಕರು ಹೊಂದಿದ್ದರು. ಆದರೆ, ಹೆಚ್ಚಿದ ಸ್ಪರ್ಧಾತ್ಮಕತೆ ಮತ್ತು ಹಣದುಬ್ಬರವು ವ್ಯಾಪಾರದ ವಿಶ್ವಾಸವನ್ನು ಮೂರು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಸಿದೆ. ತಯಾರಿಕೆ ಮತ್ತು ಉತ್ಪಾದನೆ ವೆಚ್ಚವು ಜುಲೈನಲ್ಲಿ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ಕಂಪನಿಗಳು ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಮುಂದಾದವು. ಅಲ್ಯೂಮಿನಿಯಂ, ಚರ್ಮ, ರಬ್ಬರ್ ಮತ್ತು ಉಕ್ಕಿನ ಬೆಲೆ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಸುಮಾರು 400 ತಯಾರಕರಿಗೆ ಕಳುಹಿಸಲಾದ ಪ್ರಶ್ನಾವಳಿಗಳಲ್ಲಿ ನಮೂದಾಗಿರುವ ಪ್ರತಿಕ್ರಿಯೆ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಈ ಪೈಕಿ ಶೇ 93ರಷ್ಟು ತಯಾರಕರು ಪ್ರಸ್ತುತ ಅಗತ್ಯಕ್ಕೆ ತಕ್ಕಂತೆ ಉದ್ಯೋಗಿಗಳ ಸಂಖ್ಯೆ ಸಾಕಷ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.