ನವದೆಹಲಿ: ಬಾಂಗ್ಲಾದೇಶದ ಕೆಲವು ನಿರ್ದಿಷ್ಟ ಸರಕುಗಳ ಆಮದಿನ ಮೇಲೆ ಕೇಂದ್ರ ಸರ್ಕಾರವು ನಿರ್ಬಂಧ ವಿಧಿಸಿದೆ. ಇದು ದೇಶೀಯ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ (ಎಂಎಸ್‌ಎಂಇ) ಪ್ರಗತಿಗೆ ನೆರವಾಗಲಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್‌ಐ) ಭಾನುವಾರ ಹೇಳಿದೆ.
ಒಟ್ಟು ₹6,590 ಕೋಟಿ ಮೌಲ್ಯದ ಸರಕುಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಉಭಯ ದೇಶಗಳ ದ್ವಿಪಕ್ಷೀಯ ಆಮದಿನ ಪೈಕಿ ಈ ಸರಕುಗಳ ಪಾಲು ಶೇ 42ರಷ್ಟಿದೆ. ಇದರಲ್ಲಿ ಪ್ರಮುಖವಾಗಿ ಸಿದ್ಧಉಡುಪು, ಸಂಸ್ಕರಿಸಿದ ಆಹಾರ, ಪ್ಲಾಸ್ಟಿಕ್ ಸೇರಿವೆ. ಆಯ್ದ ಸಮುದ್ರ ಮಾರ್ಗ ಅಥವಾ ಭೂ ಪ್ರದೇಶದಿಂದಲೂ ಇವುಗಳ ಆಮದಿಗೆ ನಿರ್ಬಂಧ ವಿಧಿಸಲಾಗಿದೆ.
ಇತ್ತೀಚೆಗೆ ಬಾಂಗ್ಲಾದೇಶವು ಭಾರತದಿಂದ ಪೂರೈಕೆಯಾಗುತ್ತಿದ್ದ ಹತ್ತಿ ನೂಲು, ಅಕ್ಕಿ, ಇತರೆ ಸರಕುಗಳಿಗೆ ನಿರ್ಬಂಧ ಹೇರಿತ್ತು. ಇದರ ಬೆನ್ನಲ್ಲೇ ಕೇಂದ್ರವು ಈ ನಿರ್ಧಾರ ಕೈಗೊಂಡಿದೆ.
ಬಾಂಗ್ಲಾದೇಶದ ರಫ್ತುದಾರರು ಚೀನಾದಿಂದ ಆಮದು ಮಾಡಿಕೊಳ್ಳುವ ಉಡುಪುಗಳಿಗೆ ಸುಂಕ ವಿನಾಯಿತಿ ಮತ್ತು ರಫ್ತು ಸಬ್ಸಿಡಿಯ ಪ್ರಯೋಜನ ಪಡೆಯುತ್ತಿದ್ದರು. ಇದರಿಂದ ಅವರಿಗೆ ಭಾರತದ ಮಾರುಕಟ್ಟೆಯಲ್ಲಿ ಶೇ 10ರಿಂದ ಶೇ 15ರಷ್ಟು ಲಾಭ ಸಿಗುತ್ತಿತ್ತು. ದೇಶದ ಜವಳಿ ಕಂಪನಿಗಳು ಬಾಂಗ್ಲಾದ ರಫ್ತುದಾರರಿಗೆ ಲಭಿಸುವ ಸ್ಪರ್ಧಾತ್ಮಕ ಪ್ರಯೋಜನದ ಬಗ್ಗೆ ಹಿಂದಿನಿಂದಲೂ ಪ್ರತಿಭಟಿಸುತ್ತಿದ್ದರು ಎಂದು ಜಿಟಿಆರ್‌ಐ ಹೇಳಿದೆ.
‘ಸದ್ಯ ವಿಧಿಸಿರುವ ನಿರ್ಬಂಧವು ದೇಶದ ಜವಳಿ ವಲಯಕ್ಕೆ ಹೆಚ್ಚಿನ ಬಲ ನೀಡಲಿದೆ’ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ.
‘ಬಾಂಗ್ಲಾದ ಸರಕುಗಳಿಗೆ ನಿರ್ಬಂಧ ಹೇರುವಂತೆ ದೇಶೀಯ ರಫ್ತುಗಾರರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದರು. ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ದೇಶೀಯ ಉದ್ಯಮವು ಹೆಚ್ಚಿನ ಲಾಭ ಪಡೆಯಲಿದೆ’ ಎಂದು ಸಿದ್ಧಉಡುಪು ರಫ್ತು ಉತ್ತೇಜನ ಮಂಡಳಿಯ (ಎಇಪಿಸಿ) ಉಪಾಧ್ಯಕ್ಷ ಎ. ಶಕ್ತಿವೇಲ್ ಹೇಳಿದ್ದಾರೆ.
2024–25ರಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಒಟ್ಟು ₹5,799 ಕೋಟಿ ಮೌಲ್ಯದ ಸಿದ್ಧಉಡುಪು ಆಮದಾಗಿದೆ. ಇದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಆಮದು ಪ್ರಮಾಣದಲ್ಲಿ ಶೇ 13ರಷ್ಟು ಹೆಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.