ADVERTISEMENT

ಕೋವಿಡ್‌ ಪ್ರಕರಣಗಳ ಹೆಚ್ಚಳ: ಜನವರಿಯಲ್ಲಿ ತಗ್ಗಿದ ಸೇವಾ ವಲಯದ ಚಟುವಟಿಕೆ

ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ವಹಿವಾಟು ನಡೆಸುವ ವಿಶ್ವಾಸ

ಪಿಟಿಐ
Published 3 ಫೆಬ್ರುವರಿ 2022, 11:28 IST
Last Updated 3 ಫೆಬ್ರುವರಿ 2022, 11:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌ ಪ್ರಕರಣಗಳ ಹೆಚ್ಚಳದಿಂದಾಗಿ ನಿರ್ಬಂಧಗಳು ಮತ್ತೆ ಜಾರಿಗೆ ಬಂದ ಪರಿಣಾಮವಾಗಿ ಹಾಗೂ ಹಣದುಬ್ಬರದ ಒತ್ತಡದಿಂದಾಗಿ ದೇಶದ ಸೇವಾ ವಲಯದ ಚಟುವಟಿಕೆಗಳು ಜನವರಿಯಲ್ಲಿ ಇಳಿಕೆ ಕಂಡಿವೆ ಎಂದು ಐಎಚ್‌ಎಸ್‌ ಮರ್ಕಿಟ್‌ ಸಂಸ್ಥೆ ತಿಳಿಸಿದೆ.

ಸೇವಾ ವಲಯದ ಬೆಳವಣಿಗೆಯನ್ನು ತಿಳಿಸುವ ಸೂಚ್ಯಂಕವು 2021ರ ಡಿಸೆಂಬರ್‌ನಲ್ಲಿ 55.5ರಷ್ಟು ಇದ್ದಿದ್ದು 2022ರ ಜನವರಿಯಲ್ಲಿ 51.5ಕ್ಕೆ ಇಳಿಕೆ ಆಗಿದೆ. ಇದು ಆರು ತಿಂಗಳ ಅವಧಿಯಲ್ಲಿ ದಾಖಲಾಗಿರುವ ಅತ್ಯಂತ ನಿಧಾನಗತಿಯ ಬೆಳವಣಿಗೆ.

ಓಮೈಕ್ರಾನ್‌ ಸೋಂಕು ವೇಗವಾಗಿ ಹರಡಿದ ಕಾರಣದಿಂದಾಗಿ ಹಾಗೂ ದೇಶದ ಕೆಲವು ಭಾಗಗಳಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಿದ್ದರಿಂದಾಗಿ ವಿವಿಧ ಸೇವೆಗಳಿಗೆ ಮಾರುಕಟ್ಟೆಯಲ್ಲಿ ಬರುವ ಬೇಡಿಕೆ ತಗ್ಗಿತು ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದವರು ಹೇಳಿದ್ದಾರೆ.

ADVERTISEMENT

ಸಾಂಕ್ರಾಮಿಕದ ತೀವ್ರತೆ, ನಿರ್ಬಂಧಗಳ ಮರು ಜಾರಿ ಮತ್ತು ಹಣದುಬ್ಬರದ ಒತ್ತಡಗಳಿಂದ ಬೆಳವಣಿಗೆಗೆ ಹಾನಿಯಾಗುತ್ತದೆ ಎಂದು ಕಂಪನಿಗಳು ಆತಂಕಕ್ಕೆ ಒಳಗಾದವು. ವ್ಯಾಪಾರ ನಡೆಸುವ ವಿಶ್ವಾಸವು ಸಕಾರಾತ್ಮಕ ಮಟ್ಟದಲ್ಲಿಯೇ ಇದ್ದರೂ ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ಕೋವಿಡ್‌ನ ಹೊಸ ಅಲೆಯು ಎಷ್ಟು ಸಮಯದವರೆಗೆ ಇರಲಿದೆ ಎನ್ನುವ ಆತಂಕವು ವ್ಯಾಪಾರದ ವಿಶ್ವಾಸವನ್ನು ಕುಗ್ಗಿಸಿದ್ದು, ಉದ್ಯೋಗ ಕಡಿತಕ್ಕೆ ಕಾರಣವಾಗಿದೆ. ಹಣದುಬ್ಬರದ ಒತ್ತಡವೂ ಕಂಪನಿಗಳನ್ನು ಚಿಂತೆಗೆ ಈಡುಮಾಡಿದೆ ಎಂದು ಐಎಚ್‌ಎಸ್‌ ಮರ್ಕಿಟ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ. ಲಿಮಾ ಹೇಳಿದ್ದಾರೆ.

ಸೇವಾ ವಲಯದಲ್ಲಿ ಸತತ ಎರಡನೇ ತಿಂಗಳಿನಲ್ಲಿಯೂ ಉದ್ಯೋಗ ಕಡಿತ ಕಂಡುಬಂದಿದೆ. ಭವಿಷ್ಯದ ಬಗೆಗಿನ ಅನಿಶ್ಚಿತ ಸ್ಥಿತಿ ಮತ್ತು ಬೇಡಿಕೆ ತಗ್ಗಿರುವುದೇ ಇದಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.

ಸೇವೆಗಳು ಮತ್ತು ತಯಾರಿಕಾ ವಲಯದ ಒಟ್ಟಾರೆ ಬೆಳವಣಿಗೆಯನ್ನು ಸೂಚಿಸುವ ಕಂಪೋಸಿಟ್‌ ಪಿಎಂಐ ಔಟ್‌ಪುಟ್‌ ಇಂಡೆಕ್ಸ್‌ ಡಿಸೆಂಬರ್‌ನಲ್ಲಿ 56.4ರಷ್ಟು ಇದ್ದಿದ್ದು ಜನವರಿಯಲ್ಲಿ 53ಕ್ಕೆ ಇಳಿಕೆ ಆಗಿದೆ. ಇದು ಸಹ ಆರು ತಿಂಗಳಲ್ಲಿ ಕಂಡುಬಂದ ಅತ್ಯಂತ ನಿಧಾನಗತಿಯ ಬೆಳವಣಿಗೆ ಆಗಿದೆ.

ಖಾಸಗಿ ವಲಯದಲ್ಲಿ ಸತತ ಎರಡನೇ ತಿಂಗಳಿನಲ್ಲಿಯೂ ಉದ್ಯೋಗ ಕಡಿತ ಆಗಿದೆ ಎನ್ನುವುದನ್ನು ಜನವರಿ ತಿಂಗಳ ಅಂಕಿ–ಅಂಶಗಳು ಸೂಚಿಸುತ್ತಿವೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಹಣದುಬ್ಬರವು 2011ರ ಬಳಿಕ ಅತ್ಯಂತ ಗರಿಷ್ಠ ಮಟ್ಟದಲ್ಲಿ ಏರಿಕೆ ಕಂಡಿದೆ. ಆಹಾರ, ಇಂಧನ ಮತ್ತು ಕಚ್ಚಾ ಸಾಮಗ್ರಿಗಳ ಜೊತೆಗೆ ಸಿಬ್ಬಂದಿ ಮತ್ತು ಸಾರಿಗೆ ವೆಚ್ಚವೂ ಗರಿಷ್ಠ ಮಟ್ಟದಲ್ಲಿದೆ ಎಂದು ಸಂಸ್ಥೆಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.