ADVERTISEMENT

ದೇಶದ 94 ಕೋಟಿ ಜನರಿಗೆ ಸಾಮಾಜಿಕ ಸುರಕ್ಷತೆ: ಐಎಲ್‌ಒ

ಪಿಟಿಐ
Published 11 ಜೂನ್ 2025, 15:53 IST
Last Updated 11 ಜೂನ್ 2025, 15:53 IST
<div class="paragraphs"><p>ಹಿರಿಯ ನಾಗರಿಕರು</p></div>

ಹಿರಿಯ ನಾಗರಿಕರು

   

ನವದೆಹಲಿ: ಭಾರತದಲ್ಲಿ ಸಾಮಾಜಿಕ ಸುರಕ್ಷತಾ ಸೌಲಭ್ಯಗಳನ್ನು ಪಡೆದಿರುವವರ ಪ್ರಮಾಣವು 2025ರಲ್ಲಿ ಶೇಕಡ 64.3ಕ್ಕೆ ಏರಿಕೆ ಆಗಿದೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಲ್‌ಒ) ದತ್ತಾಂಶಗಳು ತಿಳಿಸಿವೆ. ಈ ಸೌಲಭ್ಯ ಪಡೆದವರ ಪ್ರಮಾಣವು 2015ರಲ್ಲಿ ಶೇ 19ರಷ್ಟು ಆಗಿತ್ತು.

ಸಾಮಾಜಿಕ ಸುರಕ್ಷತಾ ಸೌಲಭ್ಯಗಳನ್ನು ಪಡೆದವರ ಸಂಖ್ಯೆಯ ದೃಷ್ಟಿಯಿಂದ ಭಾರತವು ಈಗ ವಿಶ್ವದಲ್ಲಿ ಎರಡನೆಯ ಸ್ಥಾನದಲ್ಲಿ ಇದೆ. ದೇಶದ 94 ಕೋಟಿ ಪ್ರಜೆಗಳಿಗೆ ಈ ಸೌಲಭ್ಯಗಳು ದೊರೆತಿವೆ ಎಂದು ಐಎಲ್‌ಒ ಹೇಳಿದೆ.

ADVERTISEMENT

‘ಸಾಮಾಜಿಕ ಸುರಕ್ಷತಾ ಸೌಲಭ್ಯಗಳನ್ನು ಪಡೆದವರ ಪ್ರಮಾಣದಲ್ಲಿನ ಏರಿಕೆಯು, ವಿಶ್ವದಲ್ಲಿ ಇಂತಹ ಸೌಲಭ್ಯಗಳ ಅತಿವೇಗದ ವಿಸ್ತರಣೆಯಾಗಿದೆ. ಇದು ಅಂತ್ಯೋದಯದ ವಿಚಾರದಲ್ಲಿ ಸರ್ಕಾರ ಹೊಂದಿರುವ ಬದ್ಧತೆಯನ್ನು ತೋರಿಸುತ್ತಿದೆ’ ಎಂದು ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಹೇಳಿದ್ದಾರೆ. ಅವರು ಐಎಲ್‌ಒ ಆಯೋಜಿಸಿರುವ 113ನೆಯ ಅಂತರರಾಷ್ಟ್ರೀಯ ಕಾರ್ಮಿಕ ಸಮಾವೇಶದಲ್ಲಿ ಭಾಗಿಯಾಗಲು ಜಿನಿವಾಕ್ಕೆ ತೆರಳಿದ್ದಾರೆ.

ಕನಿಷ್ಠ ಒಂದಾದರೂ ಸಾಮಾಜಿಕ ಸುರಕ್ಷತಾ ಸೌಲಭ್ಯದ ವ್ಯಾಪ್ತಿಗೆ ಬಂದಿರುವ ಭಾರತೀಯರ ಪ್ರಮಾಣವು ಶೇ 64.3ರಷ್ಟು ಆಗಿದೆ ಎಂಬುದನ್ನು ಐಎಲ್‌ಒ ತನ್ನ ಡ್ಯಾಶ್‌ಬೋರ್ಡ್‌ನಲ್ಲಿ ಪ್ರಕಟಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಳೆದ ದಶಕದಲ್ಲಿ ಇದ್ದ ಪ್ರಮಾಣಕ್ಕೆ ಹೋಲಿಸಿದರೆ ಈ ಸೌಲಭ್ಯ ಪಡೆದವರ ಪ್ರಮಾಣದಲ್ಲಿ ಶೇ 45ರಷ್ಟು ಏರಿಕೆ ಆಗಿದೆ, ದಶಕವೊಂದರ ಅವಧಿಯಲ್ಲಿ ಈ ಪ್ರಮಾಣದ ಏರಿಕೆ ಹಿಂದೆಂದೂ ಆಗಿರಲಿಲ್ಲ ಎಂದು ಐಎಲ್‌ಒ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಡವರು ಮತ್ತು ಕಾರ್ಮಿಕ ವರ್ಗದವರಿಗೆ ಭಾರತದಲ್ಲಿ ಜಾರಿಗೆ ತಂದಿರುವ ಅಭಿವೃದ್ಧಿ ನೀತಿಗಳನ್ನು ಐಎಲ್‌ಒ ಮಹಾನಿರ್ದೇಶಕ ಗಿಲ್ಬರ್ಟ್‌ ಎಫ್‌. ಹೊಂಗ್ಬೊ ಪ್ರಶಂಸಿಸಿದ್ದಾರೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಟಣೆ ಹೇಳಿದೆ.

ಸಾಮಾಜಿಕ ಸುರಕ್ಷತಾ ಸೌಲಭ್ಯವನ್ನು ಐಎಲ್‌ಒ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದಾದರೆ ಆ ಯೋಜನೆಗೆ ಶಾಸನವೊಂದರ ಬಲ ಇರಬೇಕು, ನಗದು ರೂಪದಲ್ಲಿ ಸೌಲಭ್ಯ ನೀಡುತ್ತಿರಬೇಕು, ಸೌಲಭ್ಯವು ಚಾಲ್ತಿಯಲ್ಲಿ ಇರಬೇಕು ಮತ್ತು ಕಳೆದ ಮೂರು ವರ್ಷಗಳ ದತ್ತಾಂಶವನ್ನು ಒದಗಿಸಬೇಕು ಎಂದು ಸಚಿವಾಲಯವು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.