
ನವದೆಹಲಿ: ಪ್ರಸಕ್ತ ಹಂಗಾಮಿನಲ್ಲಿ ದೇಶದಲ್ಲಿ ಸಕ್ಕರೆ ಉತ್ಪಾದನೆಯು ಶೇಕಡ 28.33ರಷ್ಟು ಹೆಚ್ಚಳ ಕಂಡು 77.90 ಲಕ್ಷ ಟನ್‌ಗೆ ತಲುಪಿರುವ ಹಿನ್ನೆಲೆಯಲ್ಲಿ ಸಕ್ಕರೆಯ ಕನಿಷ್ಠ ಮಾರಾಟ ದರವನ್ನು ಹೆಚ್ಚು ಮಾಡಬೇಕು ಎಂದು ಸಹಕಾರಿ ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಕೆ.ಜಿ.ಗೆ ₹41ಕ್ಕೆ ಹೆಚ್ಚಿಸಲು ಸರ್ಕಾರ ಒಪ್ಪಿಗೆ ನೀಡಬೇಕು. ಹೆಚ್ಚುವರಿಯಾಗಿ 5 ಲಕ್ಷ ಟನ್‌ಗಳಷ್ಟು ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ಬಳಸಲು ಅವಕಾಶ ನೀಡಬೇಕು ಎಂದು ಅವು ಕೋರಿವೆ.
ಮಾರುಕಟ್ಟೆಯಲ್ಲಿ ಸಕ್ಕರೆ ದರ ಇಳಿಕೆ ಹಾಗೂ ವೆಚ್ಚಗಳ ಹೆಚ್ಚಳವು ರೈತರಿಗೆ ನೀಡಬೇಕಿರುವ ಮೊತ್ತದ ಮೇಲೆ ಪರಿಣಾಮ ಉಂಟುಮಾಡುತ್ತಿವೆ ಎಂದು ಅವು ಎಚ್ಚರಿಸಿವೆ.
ಪ್ರಸಕ್ತ ಹಂಗಾಮು ಆರಂಭವಾದ ನಂತರದಲ್ಲಿ ಸಕ್ಕರೆ ಕಾರ್ಖಾನೆಗಳು ಸಗಟು ವಹಿವಾಟುದಾರರಿಗೆ ಮಾರಾಟ ಮಾಡುವ ಸಕ್ಕರೆಯ ಬೆಲೆಯು ಪ್ರತಿ ಟನ್‌ಗೆ ₹2,300ರಷ್ಟು ಕುಸಿದಿದೆ. ಈಗ ಅದು ಟನ್‌ಗೆ ₹37,700ರಷ್ಟು ಇದೆ ಎಂದು ಸಹಕಾರಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಒಕ್ಕೂಟವು (ಎನ್‌ಎಫ್‌ಸಿಎಸ್‌ಎಫ್) ಹೇಳಿದೆ.
ಡಿಸೆಂಬರ್ 15ರವರೆಗಿನ ದತ್ತಾಂಶದ ಪ್ರಕಾರ ದೇಶದ ಒಟ್ಟು 479 ಸಕ್ಕರೆ ಕಾರ್ಖಾನೆಗಳು ಒಟ್ಟು 77.90 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಆಗಿದ್ದ 60.70 ಲಕ್ಷ ಟನ್ ಸಕ್ಕರೆ ಉತ್ಪಾದನೆಗಿಂತ ಹೆಚ್ಚು ಎಂದು ಎನ್‌ಎಫ್‌ಸಿಎಸ್‌ಎಫ್ ನೀಡಿರುವ ದತ್ತಾಂಶಗಳು ಹೇಳುತ್ತಿವೆ.
ಕಬ್ಬು ಅರೆಯುವಿಕೆಯು ಈ ಹಂಗಾಮಿನಲ್ಲಿ ಶೇ 25.6ರಷ್ಟು ಹೆಚ್ಚಾಗಿ 900.75 ಲಕ್ಷ ಟನ್‌ಗೆ ಹೆಚ್ಚಾಗಿದೆ ಎಂದು ಒಕ್ಕೂಟವು ಹೇಳಿಕೆಯಲ್ಲಿ ತಿಳಿಸಿದೆ.
ದೇಶದಲ್ಲಿ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ರಾಜ್ಯವಾದ ಮಹಾರಾಷ್ಟ್ರದಲ್ಲಿ ಉತ್ಪಾದನೆಯು ದುಪ್ಪಟ್ಟಾಗಿದೆ. ಕರ್ನಾಟಕದಲ್ಲಿ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಉತ್ಪಾದನೆಯು 13.50 ಲಕ್ಷ ಟನ್ ಇದ್ದಿದ್ದು ಈ ಬಾರಿ 15.50 ಲಕ್ಷ ಟನ್ ಆಗಿದೆ.
ಪ್ರಸಕ್ತ ಹಂಗಾಮಿನಲ್ಲಿ ಒಟ್ಟು 15 ಲಕ್ಷ ಟನ್ ಸಕ್ಕರೆ ರಫ್ತಿಗೆ ಕೇಂದ್ರವು ಅನುಮತಿ ನೀಡಿದೆ. ಆದರೆ ಈ ಕ್ರಮವೊಂದೇ ಸಕ್ಕರೆ ಕಾರ್ಖಾನೆಗಳ ನಗದು ಬಿಕ್ಕಟ್ಟನ್ನು ಪರಿಹರಿಸುವುದಿಲ್ಲ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.