ADVERTISEMENT

ಅಲ್ಪ ಕಾಲ ಮಾತ್ರ ತಾಳೆ ಎಣ್ಣೆ ರಫ್ತು ನಿಷೇಧ: ವರ್ತಕರ ವಿಶ್ವಾಸ

ರಾಯಿಟರ್ಸ್
Published 26 ಏಪ್ರಿಲ್ 2022, 12:38 IST
Last Updated 26 ಏಪ್ರಿಲ್ 2022, 12:38 IST

ಜಕಾರ್ತಾ/ಮುಂಬೈ: ತಾಳೆ ಎಣ್ಣೆ ರಫ್ತಿಗೆ ಇಂಡೊನೇಷ್ಯಾ ಸರ್ಕಾರ ವಿಧಿಸಲಿರುವ ನಿಷೇಧವು ಒಂದು ತಿಂಗಳಿಗೂ ಹೆಚ್ಚು ಕಾಲ ಜಾರಿಯಲ್ಲಿರುವುದು ಅನುಮಾನ ಎಂದು ಉದ್ಯಮದ ಮೂಲಗಳು ಹೇಳಿವೆ.

ತಾಳೆ ಎಣ್ಣೆಯನ್ನು ಸಂಗ್ರಹಿಸಿ ಇಡಲು ಇಂಡೊನೇಷ್ಯಾದಲ್ಲಿ ಹೆಚ್ಚಿನ ಸೌಲಭ್ಯ ಇಲ್ಲ. ಅಲ್ಲದೆ, ರಫ್ತು ಮುಂದುವರಿಸುವಂತೆ ವರ್ತಕರು ಒತ್ತಡ ಹೇರುತ್ತಿದ್ದಾರೆ ಎಂದು ಗೊತ್ತಾಗಿದೆ. ನಿಷೇಧವು ಗುರುವಾರದಿಂದ ಜಾರಿಗೆ ಬರಲಿದೆ.

ರಫ್ತು ನಿಷೇಧವು ರಿಫೈನ್ಡ್‌ ತಾಳೆ ಎಣ್ಣೆಗೆ ಮಾತ್ರ ಅನ್ವಯವಾಗುತ್ತದೆ, ಕಚ್ಚಾ ತಾಳೆ ಎಣ್ಣೆಗೆ ಅಲ್ಲ ಎಂದು ಇಂಡೊನೇಷ್ಯಾ ಅಧಿಕಾರಿಗಳು ಹೇಳಿದ್ದಾರೆ. ಆದರೆ, ‘ರಿಫೈನ್ಡ್‌ ತಾಳೆ ಎಣ್ಣೆಗೆ ಕೊರತೆ ಎದುರಾದರೆ’ ರಫ್ತು ನಿಷೇಧದ ವ್ಯಾಪ್ತಿಯನ್ನು ಹಿಗ್ಗಿಸಲಾಗುತ್ತದೆ ಎಂದು ಇಂಡೊನೇಷ್ಯಾ ಸರ್ಕಾರವು ಅಲ್ಲಿನ ಕಂಪನಿಗಳ ಬಳಿ ಹೇಳಿದೆ.

ADVERTISEMENT

‘ರಫ್ತಿಗೆ ಸಂಪೂರ್ಣ ನಿಷೇಧ ವಿಧಿಸಿದರೆ ಒಂದು ತಿಂಗಳು ತುಂಬುವ ಮೊದಲೇ ಸಂಗ್ರಹಾಗಾರಗಳು ಭರ್ತಿಯಾಗುತ್ತವೆ’ ಎಂದು ಇಂಡೊನೇಷ್ಯಾದ ತಾಳೆ ಎಣ್ಣೆ ವರ್ತಕರ ಸಂಘಟನೆಗಳು ಹೇಳಿವೆ. ಇಂಡೊನೇಷ್ಯಾದಲ್ಲಿ ಈಗಾಗಲೇ 50 ಲಕ್ಷ ಟನ್ ತಾಳೆ ಎಣ್ಣೆ ಸಂಗ್ರಹ ಇದೆ.

‘ದೇಶಿ ಗ್ರಾಹಕರಿಗೆ ಅನುಕೂಲ ಆಗಲಿ ಎಂದು ರಫ್ತು ನಿಷೇಧಿಸಲಾಗುತ್ತಿದೆ. ಆದರೆ ನಿಷೇಧವನ್ನು ಬಹಳ ಕಾಲ ಮುಂದುವರಿಸಿದರೆ ಅಲ್ಲಿನ ರೈತರು ತೊಂದರೆಗೆ ಸಿಲುಕಿಕೊಳ್ಳುತ್ತಾರೆ’ ಎಂದು ಮುಂಬೈ ಮೂಲದ ಅಡುಗೆ ಎಣ್ಣೆ ವರ್ತಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.