ADVERTISEMENT

ತಗ್ಗಿದ ಕೈಗಾರಿಕಾ ಉತ್ಪಾದನೆ, ಇಳಿದ ಹಣದುಬ್ಬರ

ಅನ್ನಪೂರ್ಣ ಸಿಂಗ್
Published 12 ಜನವರಿ 2021, 20:00 IST
Last Updated 12 ಜನವರಿ 2021, 20:00 IST
   

ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆಯ ಪ್ರಮಾಣವು ನವೆಂಬರ್ ತಿಂಗಳಿನಲ್ಲಿ ಶೇಕಡ 1.9ರಷ್ಟು ಇಳಿಕೆ ಕಂಡಿದೆ. ಇದು, ಆರ್ಥಿಕ ಚೇತರಿಕೆಯು ಎಲ್ಲ ವಲಯಗಳಲ್ಲೂ ಸಮ ಪ್ರಮಾಣದಲ್ಲಿ ಆಗುತ್ತಿಲ್ಲ ಎಂಬ ಸೂಚನೆಯನ್ನು ನೀಡಿದೆ.

ಆದರೆ, ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರದ ಪ್ರಮಾಣವು ಶೇಕಡ 4.59ಕ್ಕೆ ತಗ್ಗಿದೆ. ಒಂದು ತಿಂಗಳ ಹಿಂದೆ ಚಿಲ್ಲರೆ ಶೇ 6.93ರಷ್ಟು ಇತ್ತು. ಆಹಾರ ವಸ್ತುಗಳ ಹಣದುಬ್ಬರ ಕೂಡ ತಗ್ಗಿರುವ ಕಾರಣ, ನೀತಿ ನಿರೂಪಕರಲ್ಲಿ ಸಮಾಧಾನ ಮೂಡಿದೆ. ಡಿಸೆಂಬರ್‌ನಲ್ಲಿ ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಶೇ 3.41ಕ್ಕೆ ಇಳಿದಿದೆ. ಒಂದು ತಿಂಗಳ ಹಿಂದೆ ಅದು ಶೇ 9.5ರಷ್ಟು ಇತ್ತು.

‘ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣದಲ್ಲಿ ತೀವ್ರ ಇಳಿಕೆ ಕಂಡುಬಂದಿರುವ ಪರಿಣಾಮವಾಗಿ, ಚಿಲ್ಲರೆ ಹಣದುಬ್ಬರ ಪ್ರಮಾಣ ತಗ್ಗಿದೆ. ಈ ಸಂದರ್ಭದಲ್ಲಿ ಒಟ್ಟಾರೆ ಹಣದುಬ್ಬರ ಪ್ರಮಾಣ ಇಳಿದಿರುವುದು ಒಳ್ಳೆಯದೇ ಆದರೂ, ಆಹಾರ ಮತ್ತು ಇಂಧನ ಹೊರತುಪಡಿಸಿದ ಇತರ ವಲಯಗಳಲ್ಲಿನ ಹಣದುಬ್ಬರ ಪ್ರಮಾಣವನ್ನು ಆರ್‌ಬಿಐ ಸೂಕ್ಷ್ಮವಾಗಿ ಗಮನಿಸುತ್ತ ಇರಲಿದೆ’ ಎಂದು ನೈಟ್ ಫ್ರ್ಯಾಂಕ್‌ ಇಂಡಿಯಾ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ರಜನಿ ಸಿನ್ಹಾ ಹೇಳಿದರು.

ADVERTISEMENT

ತಯಾರಿಕಾ ವಲಯದ ಉತ್ಪಾದನೆಯ ಪ್ರಮಾಣದಲ್ಲಿ ನವೆಂಬರ್‌ನಲ್ಲಿ ಶೇ 1.7ರಷ್ಟು, ಗಣಿಗಾರಿಕೆ ವಲಯದ ಉತ್ಪಾದನೆಯಲ್ಲಿ ಶೇ 7.3ರಷ್ಟು ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.