ADVERTISEMENT

ಹಣದುಬ್ಬರ: ಇ–ವಾಣಿಜ್ಯ ವೇದಿಕೆಗಳಿಂದ ಬೆಲೆ ವಿವರದ ಮಾಹಿತಿ ಸಂಗ್ರಹ

ಗ್ರಾಹಕ ಬೆಲೆ ಸೂಚ್ಯಂಕವನ್ನು ಇನ್ನಷ್ಟು ನಿಖರ, ವಿಶ್ವಾಸಾರ್ಹ ಆಗಿಸಲು ಕ್ರಮ

ಪಿಟಿಐ
Published 23 ಡಿಸೆಂಬರ್ 2025, 16:07 IST
Last Updated 23 ಡಿಸೆಂಬರ್ 2025, 16:07 IST
ಚಿಲ್ಲರೆ ಹಣದುಬ್ಬರ– ಸಾಂದರ್ಭಿಕ ಚಿತ್ರ
ಚಿಲ್ಲರೆ ಹಣದುಬ್ಬರ– ಸಾಂದರ್ಭಿಕ ಚಿತ್ರ   

ನವದೆಹಲಿ: ಹಣದುಬ್ಬರದ ‍ಪ್ರಮಾಣವನ್ನು ಲೆಕ್ಕಹಾಕುವಾಗ ಇ–ವಾಣಿಜ್ಯ ವೇದಿಕೆಗಳಲ್ಲಿ ವಿವಿಧ ಉತ್ಪನ್ನಗಳಿಗೆ ನಿಗದಿ ಮಾಡಿರುವ ಬೆಲೆ, ವಿವಿಧ ಆನ್‌ಲೈನ್‌ ವೇದಿಕೆಗಳಲ್ಲಿ ನಮೂದಾಗಿರುವ ಬೆಲೆಯನ್ನು ಕೂಡ ಪರಿಗಣಿಸಲು ಕೇಂದ್ರ ಸರ್ಕಾರ ಆಲೋಚನೆ ನಡೆಸುತ್ತಿದೆ.

ಹೀಗೆ ಮಾಡುವುದರಿಂದ ಹಣದುಬ್ಬರ ಲೆಕ್ಕಹಾಕಲು ಆಶ್ರಯಿಸುವ ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ವಿಶ್ವಾಸಾರ್ಹತೆಯು ಸುಧಾರಿಸುತ್ತದೆ ಎಂಬುದು ಸರ್ಕಾರದ ನಿರೀಕ್ಷೆ.

ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು ಸಿಪಿಐ, ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ಮತ್ತು ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಮೂಲ ವರ್ಷವನ್ನು ಪರಿಷ್ಕರಿಸುವ ಪ್ರಕ್ರಿಯೆ ಕೈಗೆತ್ತಿಕೊಂಡಿದೆ.

ADVERTISEMENT

ಸಚಿವಾಲಯವು ಮಂಗಳವಾರ ಸಮಾಲೋಚನಾ ಕಾರ್ಯಾಗಾರವೊಂದನ್ನು ಆಯೋಜಿಸಿತ್ತು.

ಈಗಿರುವ ವ್ಯವಸ್ಥೆಯ ಅಡಿಯಲ್ಲಿ ಭೌತಿಕ ಮಳಿಗೆಗಳಿಂದ ಬೆಲೆಯ ವಿವರ ಸಂಗ್ರಹಿಸಲಾಗುತ್ತಿದೆ. ಹೊಸ ವ್ಯವಸ್ಥೆಯ ಅಡಿಯಲ್ಲಿ ಇದರ ಜೊತೆಯಲ್ಲೇ, ಇ–ವಾಣಿಜ್ಯ ವೇದಿಕೆಗಳಿಂದಲೂ ವಿವಿಧ ಉತ್ಪನ್ನಗಳ ಬೆಲೆಯ ವಿವರ ಪಡೆಯಲಾಗುತ್ತದೆ. 25 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 12 ಆಯ್ದ ನಗರಗಳಲ್ಲಿನ ಇ–ಕಾಮರ್ಸ್‌ ವೇದಿಕೆಗಳಿಂದ ಬೆಲೆ ವಿವರ ಸಂಗ್ರಹಿಸಲಾಗುತ್ತದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಈ ಮಾಹಿತಿಯನ್ನು ಪಡೆಯುವುದರಿಂದ ಸಿಪಿಐ ಸೂಚ್ಯಂಕವು ಹೆಚ್ಚು ಪ್ರಾತಿನಿಧಿಕವಾಗುತ್ತದೆ, ಅದು ಹೆಚ್ಚು ವಿಶ್ವಾಸಾರ್ಹವಾಗುತ್ತದೆ, ಅದರ ದತ್ತಾಂಶವು ಇನ್ನಷ್ಟು ನಿಖರವಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಸಚಿವಾಲಯವು ಇನ್ನಷ್ಟು ಸಂಖ್ಯೆಯ ಗ್ರಾಮೀಣ ಹಾಗೂ ನಗರ ಮಾರುಕಟ್ಟೆಗಳಿಂದ ವಿವರ ಸಂಗ್ರಹಿಸಲು ಮುಂದಾಗಿದೆ.

ಕಾರ್ಯಾಗಾರದಲ್ಲಿ ಮಾತನಾಡಿದ ಸಚಿವಾಲಯದ ಕಾರ್ಯದರ್ಶಿ ಸೌರಭ್ ಗರ್ಗ್‌ ಅವರು, ಫೆಬ್ರುವರಿಯಲ್ಲಿ ಹೊಸ ದತ್ತಾಂಶ ಸರಣಿಯನ್ನು ಬಿಡುಗಡೆ ಮಾಡಿದ ನಂತರದಲ್ಲಿಯೂ ಜಿಡಿ‍ಪಿ ಸಂಬಂಧಿತ ಅಂಕಿ–ಅಂಶಗಳಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಲಿಕ್ಕಿಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು 1,181 ಗ್ರಾಮೀಣ ಮಾರುಕಟ್ಟೆಗಳಿಂದ ಹಾಗೂ 1,114 ನಗರ ಮಾರುಕಟ್ಟೆಗಳಿಂದ ಮಾಹಿತಿ ಸಂಗ್ರಹಿಸಿ ಸಿಪಿಐ ಸೂಚ್ಯಂಕದ ಮಟ್ಟವನ್ನು ನಿರ್ಧರಿಸುತ್ತದೆ. ಸಿಪಿಐ ಆಧಾರಿತ ಚಿಲ್ಲರೆ ಹಣದುಬ್ಬರದ ಪ್ರಮಾಣ ಆಧರಿಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ರೆಪೊ ದರ ಎಷ್ಟಿರಬೇಕು ಎಂಬುದನ್ನು ತೀರ್ಮಾನಿಸುತ್ತದೆ.

ಸಿಪಿಐ ದತ್ತಾಂಶದ ಹೊಸ ಸರಣಿಯನ್ನು ಕೇಂದ್ರವು 2026ರ ಫೆಬ್ರುವರಿ 12ರಂದು ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.