ADVERTISEMENT

ನಿಯಂತ್ರಣಕ್ಕೆ ಬಾರದ ಹಣದುಬ್ಬರ; ಏಪ್ರಿಲ್‌ನಲ್ಲಿ ಮತ್ತೆ ರೆಪೊ ದರ ಏರಿಕೆ?

ಪಿಟಿಐ
Published 13 ಮಾರ್ಚ್ 2023, 23:40 IST
Last Updated 13 ಮಾರ್ಚ್ 2023, 23:40 IST
   

ನವದೆಹಲಿ: ಫೆಬ್ರುವರಿಯಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇಕಡ 6.44ಕ್ಕೆ ಇಳಿಕೆ ಕಂಡಿದೆ. ಆದರೆ, ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ನಿಗದಿ ಮಾಡಿಕೊಂಡಿರುವ ಮಿತಿಗಿಂತ ಹೆಚ್ಚಿನ ಮಟ್ಟದಲ್ಲಿಯೇ ಉಳಿದಿದೆ. ಇದರಿಂದಾಗಿ ಆರ್‌ಬಿಐ ಏಪ್ರಿಲ್‌ ಮೊದಲ ವಾರದಲ್ಲಿ ರೆಪೊ ದರವನ್ನು ಮತ್ತೆ ಹೆಚ್ಚಿಸುವ ಸಾಧ್ಯತೆ ಇದೆ.

ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 6.52 ಆಗಿತ್ತು. ಇದಕ್ಕೆ ಹೋಲಿಸಿದರೆ ಫೆಬ್ರುವರಿಯಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣದಲ್ಲಿ ತುಸು ಇಳಿಕೆ ಕಂಡುಬಂದಿದೆ. ಹಿಂದಿನ ವರ್ಷದ ಫೆಬ್ರುವರಿಯಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 6.07ರಷ್ಟು ಇತ್ತು.

ಫೆಬ್ರುವರಿಯಲ್ಲಿ ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಶೇ 5.95ರಷ್ಟು ಇತ್ತು. ಇದು ಜನವರಿಯಲ್ಲಿ ಶೇ 6ರಷ್ಟು, ಹಿಂದಿನ ವರ್ಷದ ಫೆಬ್ರುವರಿಯಲ್ಲಿ ಶೇ 5.85ರಷ್ಟು ಇತ್ತು.

ADVERTISEMENT

ಗ್ರಾಮೀಣ ಪ್ರದೇಶಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಹೆಚ್ಚಿನ ಮಟ್ಟದಲ್ಲಿ ಉಳಿದಿದೆ. ನಗರ ಪ್ರದೇಶಗಳಲ್ಲಿ ಇದು ಶೇ 6.10ರಷ್ಟು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶೇ 6.72ರಷ್ಟು ಇದೆ.

ನವೆಂಬರ್ ಮತ್ತು ಡಿಸೆಂಬರ್‌ ಹೊರತುಪಡಿಸಿದರೆ, ಚಿಲ್ಲರೆ ಹಣ ದುಬ್ಬರ ಪ್ರಮಾಣವು ಆರ್‌ಬಿಐ ನಿಗದಿ ಮಾಡಿಕೊಂಡಿರುವ ಗರಿಷ್ಠ ಮಿತಿಯಾದ ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉಳಿದಿದೆ.

ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಆರ್‌ಬಿಐ ಶೇ 4ಕ್ಕೆ ಮಿತಿಗೊಳಿಸಬೇಕು. ಹಣದುಬ್ಬರ ಪ್ರಮಾಣವು ಗರಿಷ್ಠ ಶೇ 6ಕ್ಕಿಂತ ಹೆಚ್ಚಾಗಬಾರದು ಎಂಬುದು ಆರ್‌ಬಿಐಗೆ ನಿಗದಿ ಮಾಡಿರುವ ಮಿತಿ.

ಹಣದುಬ್ಬರದ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಆರ್‌ಬಿಐ 2022ರ ಮೇ ತಿಂಗಳಿನಿಂದ ರೆಪೊ ದರ ಹೆಚ್ಚಿಸುತ್ತಿದೆ. ಮೇ ತಿಂಗಳಿನಿಂದ ಇದುವರೆಗೆ ರೆಪೊ ದರ ಶೇ 2.50ಯಷ್ಟು ಹೆಚ್ಚಾಗಿದೆ.

‘ಸತತ ಎರಡು ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರುವ ಕಾರಣ, ಆರ್‌ಬಿಐ ರೆಪೊ ದರವನ್ನು ಮತ್ತೆ ಹೆಚ್ಚಿಸುವ ಸಾಧ್ಯತೆ ಇದೆ’ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಯ್ಯರ್ ಹೇಳಿದ್ದಾರೆ.

ಆದರೆ ರೆಪೊ ದರ ಏರಿಕೆಯ ತೀರ್ಮಾನದ ಮೇಲೆ ಜಾಗತಿಕ ಬೆಳವಣಿಗೆಗಳು ಕೂಡ ಪರಿಣಾಮ ಉಂಟುಮಾಡಬಹುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.