ನವದೆಹಲಿ: ‘ವಿಕಸಿತ ಭಾರತದ ಗುರಿ ಸಾಧನೆ ಮತ್ತು ಎಲ್ಲರಿಗೂ ಸಾಮಾಜಿಕ ಭದ್ರತೆ ಕಲ್ಪಿಸಲು ಸರ್ಕಾರ ಪ್ರತಿ ವರ್ಷ ₹15 ಲಕ್ಷ ಕೋಟಿಯನ್ನು ಮೂಲಸೌಕರ್ಯ ವಲಯ ಅಭಿವೃದ್ಧಿಗೆ ವ್ಯಯಿಸಬೇಕಿದೆ’ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ.
2047ರ ವೇಳೆಗೆ ಸರ್ಕಾರವು ‘ವಿಕಸಿತ ಭಾರತ’ದ ಗುರಿ ಹೊಂದಿದೆ. ಆ ವೇಳೆಗೆ ದೇಶಕ್ಕೆ ಸ್ವಾತಂತ್ರ್ಯ ದೊರೆತು 100 ವರ್ಷ ಆಗಲಿದೆ ಎಂದರು.
2012ರಲ್ಲಿ ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ಬಜೆಟ್‌ನಲ್ಲಿ ₹1.2 ಲಕ್ಷ ಕೋಟಿ ಹೂಡಿಕೆ ಮಾಡಲಾಗಿತ್ತು. 2014ರಲ್ಲಿ ₹2.4 ಲಕ್ಷ ಕೋಟಿಗೆ ಏರಿಕೆಯಾಗಿತ್ತು. ಆದರೆ, 2024ರ ವೇಳೆಗೆ ₹11.5 ಲಕ್ಷ ಕೋಟಿಗೆ ಮುಟ್ಟಿದೆ. ಇದು ₹15 ಲಕ್ಷ ಕೋಟಿಗೆ ಹೆಚ್ಚಳವಾಗಬೇಕಿದೆ. ಮುಂದಿನ 25 ವರ್ಷ ಸರ್ಕಾರವು ₹15 ಲಕ್ಷ ಕೋಟಿಯನ್ನು ಮೂಲಸೌಕರ್ಯ ವಲಯದಲ್ಲಿ ಪ್ರತಿ ವರ್ಷ ಹೂಡಿಕೆ ಮಾಡಿದರೆ ಮಾತ್ರ 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಹೇಳಿದರು.
ದೇಶದ ಜನರಲ್ಲಿ ಸರಕು ಖರೀದಿ ಸಾಮರ್ಥ್ಯ ಹೆಚ್ಚಳವಾಗಿದೆ. ಜೊತೆಗೆ ಹೊಸ ವಲಯದಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಇದರಿಂದ ದೇಶದ ಆರ್ಥಿಕತೆ ಕ್ಷಿಪ್ರವಾಗಿ ವಿಸ್ತರಣೆ ಆಗುತ್ತಿದೆ ಎಂದು ಸೋಮವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
2014ರಲ್ಲಿ ಶೇ 24ರಷ್ಟು ಕಾರ್ಮಿಕರಿಗೆ ಮಾತ್ರ ಸಾಮಾಜಿಕ ಭದ್ರತೆ ಸೌಲಭ್ಯ ಸಿಗುತ್ತಿತ್ತು. ಅದು ಈಗ ಶೇ 68ಕ್ಕೆ ಏರಿಕೆಯಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.