ADVERTISEMENT

ಬ್ರೆಂಟ್‌ ಕಚ್ಚಾ ತೈಲ ದರ ಬ್ಯಾರೆಲ್‌ಗೆ 118 ಡಾಲರ್‌; 9 ವರ್ಷಗಳ ಗರಿಷ್ಠ ಮಟ್ಟ

ರಷ್ಯಾ–ಉಕ್ರೇನ್‌ ಸಂಘರ್ಷ

ರಾಯಿಟರ್ಸ್
Published 3 ಮಾರ್ಚ್ 2022, 6:24 IST
Last Updated 3 ಮಾರ್ಚ್ 2022, 6:24 IST
ಬ್ರೆಂಟ್‌ ಕಚ್ಚಾ ತೈಲ-ಪ್ರಾತಿನಿಧಿಕ ಚಿತ್ರ
ಬ್ರೆಂಟ್‌ ಕಚ್ಚಾ ತೈಲ-ಪ್ರಾತಿನಿಧಿಕ ಚಿತ್ರ   

ಸಿಂಗಪುರ: ರಷ್ಯಾ–ಉಕ್ರೇನ್‌ ಸಂಘರ್ಷದಿಂದಾಗಿ ಗುರುವಾರವೂ ಸಹ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿದೆ. ಬ್ರೆಂಟ್‌ ಕಚ್ಚಾ ತೈಲ ದರವು ಬ್ಯಾರಲ್‌ಗೆ 118 ಡಾಲರ್‌ ದಾಟಿದೆ.

ಹಲವು ರಾಷ್ಟ್ರಗಳು ರಷ್ಯಾ ಮೇಲೆ ನಿರ್ಬಂಧ ವಿಧಿಸಿರುವ ಕಾರಣದಿಂದಾಗಿ ರಷ್ಯಾದಿಂದ ಕಚ್ಚಾ ತೈಲ ಸಾಗಣೆ ಮತ್ತು ವಹಿವಾಟಿಗೆ ಅಡ್ಡಿಯಾಗಿದೆ. ಇದರ ಬೆನ್ನಲ್ಲೇ ಅಮೆರಿಕದ ಕಚ್ಚಾ ತೈಲ ಸಂಗ್ರಹದಲ್ಲಿ ಭಾರೀ ಇಳಿಕೆಯಾಗಿದೆ.

2013ರ ಆಗಸ್ಟ್‌ ನಂತರ ಇದೇ ಮೊದಲ ಬಾರಿಗೆ ಬ್ರೆಂಟ್‌ ಕಚ್ಚಾ ತೈಲದ ಫ್ಯೂಚರ್ಸ್‌ ಬೆಲೆ ಪ್ರತಿ ಬ್ಯಾರೆಲ್‌ಗೆ 118.12 ಡಾಲರ್‌ ತಲುಪಿದೆ. ಅಮೆರಿಕದ ವೆಸ್ಟ್‌ ಟೆಕ್ಸಸ್‌ ಇಂಟರ್‌ಮಿಡಿಯೇಟ್‌ (ಡಬ್ಲ್ಯುಟಿಎಸ್‌) ದರ್ಜೆಯ ಕಚ್ಚಾ ತೈಲ ದರ ಬ್ಯಾರೆಲ್‌ಗೆ 2.41 ಡಾಲರ್‌ ಏರಿಕೆಯಾಗಿ 113.01 ಡಾಲರ್‌ ಮುಟ್ಟಿದೆ. ಇದು ಕಳೆದ 11 ವರ್ಷಗಳಲ್ಲಿ ದಾಖಲಾಗಿರುವ ಅತ್ಯಧಿಕ ದರವಾಗಿದೆ.

ADVERTISEMENT

ತೈಲ ರಫ್ತು ದೇಶಗಳ ಒಕ್ಕೂಟ (ಒಪೆಕ್‌) ಹೊರತುಪಡಿಸಿ, ವಿಶ್ವದಲ್ಲಿ ಹೆಚ್ಚು ಕಚ್ಚಾ ತೈಲ ಉತ್ಪಾದಿಸುವ ಎರಡನೇ ದೊಡ್ಡ ದೇಶ ರಷ್ಯಾ. ರಷ್ಯಾವನ್ನು ಒಪೆಕ್‌ ಪ್ಲಸ್‌ ದೇಶ ಎಂದು ಪರಿಗಣಿಸಲಾಗಿದೆ. ರಷ್ಯಾದಿಂದ ಬಿಕರಿಯಾಗುವ ಕಚ್ಚಾ ತೈಲವನ್ನು ಬ್ರೆಂಟ್‌ ಕಚ್ಚಾ ತೈಲ ಎಂದು ವರ್ಗೀಕರಿಸಲಾಗಿದೆ. ಉಕ್ರೇನ್‌ ಬಿಕ್ಕಟ್ಟನ್ನು ಪರಿಗಣಿಸದೆ ಮಾರ್ಚ್‌ನಿಂದ ಕಚ್ಚಾ ತೈಲ ಉತ್ಪಾದನೆಯನ್ನು ನಿತ್ಯ 4,00,000 ಬ್ಯಾರೆಲ್‌ಗಳಿಗೆ ಹೆಚ್ಚಿಸುವುದನ್ನು ಮುಂದುವರಿಸಲು ಒಪೆಕ್‌ ರಾಷ್ಟ್ರಗಳು ಇತ್ತೀಚೆಗೆ ನಿರ್ಧರಿಸಿದ್ದವು.

ರಷ್ಯಾದ ತೈಲ ಸಂಸ್ಕರಣಾ ವಲಯದ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಪ್ರಸ್ತುತ ಹಲವು ರಾಷ್ಟ್ರಗಳಿಂದ ಕಚ್ಚಾ ತೈಲಕ್ಕೆ ಬೇಡಿಕೆ ಇದ್ದರೂ ನಿರ್ಬಂಧಗಳ ಕಾರಣದಿಂದಾಗಿ ಅದರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಹಾಗೂ ದರ ಏರಿಕೆಯಾಗಿದೆ.

ರಷ್ಯಾದಿಂದ ಜಾಗತಿಕ ಮಾರುಕಟ್ಟೆಗೆ ಅತಿ ಹೆಚ್ಚು ತೈಲ ಪೂರೈಕೆಯಾಗುತ್ತಿದೆ ಹಾಗೂ ತೈಲ ಉತ್ಪಾದನೆಯಲ್ಲಿ ರಷ್ಯಾ 3ನೇ ಸ್ಥಾನದಲ್ಲಿದೆ. ಡಿಸೆಂಬರ್‌ನಲ್ಲಿ ರಷ್ಯಾದಿಂದ ರಫ್ತು ಮಾಡಲಾಗಿರುವ ಕಚ್ಚಾ ತೈಲ ಮತ್ತು ತೈಲ ಉತ್ಪನ್ನಗಳ ಪ್ರಮಾಣವು ನಿತ್ಯ 78 ಲಕ್ಷ ಬ್ಯಾರೆಲ್‌ಗಳಷ್ಟಿತ್ತು ಎಂದು ವರದಿಯಾಗಿದೆ.

ಯುದ್ಧ ಮುಂದುವರಿದಂತೆ ಕಚ್ಚಾ ತೈಲದ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಿದ್ದು, ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ಮತ್ತಷ್ಟು ತುಟ್ಟಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.