ADVERTISEMENT

ಪ್ರಜ್ಞಾವಂತ ಹೂಡಿಕೆದಾರರ ವರ್ಷ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 19:30 IST
Last Updated 25 ಡಿಸೆಂಬರ್ 2018, 19:30 IST
ಎಂಎಫ್‌
ಎಂಎಫ್‌   

ಒಂದರ್ಥದಲ್ಲಿ 2018 ಹಣ ಹೂಡಿಕೆಗೆ ಜ್ಞಾನೋದಯದ ವರ್ಷ. ಹೂಡಿಕೆಯ ವಿಚಾರದಲ್ಲಿ ಭಾರತೀಯರು ಬುದ್ಧಿವಂತರಾಗುತ್ತಿದ್ದಾರೆ ಎಂಬುದನ್ನು ಸಾಬೀತುಮಾಡಿದ ವರ್ಷವಿದು. ಅಕ್ಟೋಬರ್‌ ತಿಂಗಳ ಅಂತ್ಯದ ವೇಳೆಗೆ ಚಿಲ್ಲರೆ ಹೂಡಿಕೆ ಕ್ಷೇತ್ರದಿಂದ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ–ಸಿಪ್‌) ಮೂಲಕ ಆಗಿರುವ ಹೂಡಿಕೆಯ ಪ್ರಮಾಣವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 42ರ ಭಾರಿ ಏರಿಕೆ ದಾಖಲಿಸಿ, ₹ 7,985 ಕೋಟಿಗೆ ತಲುಪಿದೆ. ರೂಪಾಯಿ ಮೌಲ್ಯ ಕುಸಿತ ಮತ್ತು ತೈಲಬೆಲೆ ಏರಿಕೆಯಿಂದಾಗಿ ಷೇರು ಮಾರುಕಟ್ಟೆ ಡೋಲಾಯಮಾನವಾಗಿದ್ದರೂ ಈ ಏರಿಕೆ ದಾಖಲಾಗಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಮ್ಯೂಚುವಲ್‌ ಫಂಡ್‌ಗಳಲ್ಲಿ ಸದ್ಯಕ್ಕೆ 2.5 ಕೋಟಿ ‘ಎಸ್‌ಐಪಿ’ ಖಾತೆಗಳ ಮೂಲಕ ನಿಯಮಿತವಾಗಿ ಹೂಡಿಕೆ ನಡೆಯುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರತಿ ತಿಂಗಳೂ ಸರಾಸರಿ ಹತ್ತು ಲಕ್ಷ ಹೊಸ ‘ಎಸ್‌ಐಪಿ’ ಖಾತೆಗಳು ಸೇರ್ಪಡೆಯಾಗಿವೆ ಎಂದು ಮ್ಯೂಚುವಲ್‌ ಫಂಡ್ ಉದ್ದಿಮೆಯ (ಎಎಂಎಫ್‌ಐ) ಅಂಕಿಅಂಶಗಳು ಹೇಳುತ್ತವೆ. ಈ ಖಾತೆಗಳ ಸರಾಸರಿ ಹೂಡಿಕೆಯ ಪ್ರಮಾಣ ₹ 3,200ರಷ್ಟಿದೆ.

ನಿಷ್ಕ್ರಿಯ (passive) ಫಂಡ್‌ ಹೂಡಿಕೆಯ ಬಗ್ಗೆ ಅಂದರೆ ಷೇರುಪೇಟೆಯಲ್ಲಿ ಹಣ ತೊಡಗಿಸುವ ಪ್ರವೃತ್ತಿಯು ಭಾರತದಲ್ಲಿ ಹೆಚ್ಚುತ್ತಿರುವುದೂ 2018ರಲ್ಲಿ ಕಂಡುಬಂದಿದೆ. 2008ರಲ್ಲಿ ಭಾರತೀಯ ನಿಷ್ಕ್ರಿಯ ಹೂಡಿಕೆ ಉದ್ದಿಮೆಯು ₹ 9000 ಕೋಟಿ ಮೊತ್ತದ್ದಾಗಿದ್ದರೆ, 2018ರ ಆಗಸ್ಟ್‌ನಲ್ಲಿ ಅದು ₹1ಲಕ್ಷ ಕೋಟಿಗೆ ತಲುಪಿದೆ. ಈ ಒಂದು ದಶಕದಲ್ಲಾದ ಬೆಳವಣಿಗೆ ಅಗಾಧವಾದುದು. ಆದರೆ ಒಟ್ಟಾರೆ ₹25 ಲಕ್ಷ ಕೋಟಿ ಮೌಲ್ಯದ ಭಾರತೀಯ ಮ್ಯೂಚುವಲ್‌ ಫಂಡ್‌ ಉದ್ದಿಮೆಗೆ ಹೋಲಿಸಿದರೆ ಈ ಮೊತ್ತವು ಶೇ 5ರಷ್ಟೂ ಇಲ್ಲ ಎಂಬುದೂ ಗಮನಾರ್ಹ.

ADVERTISEMENT

ವೆಚ್ಚದ ಅನುಪಾತ ಕಡಿಮೆ ಮಾಡುವುದು, ಉತ್ಪನ್ನಗಳ ಆದಾಯ ಹೆಚ್ಚಿಸುವುದು ಮತ್ತು ಹೆಚ್ಚಿನ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಮ್ಯೂಚುವಲ್‌ ಫಂಡ್‌ಗಳ ನಿಯಂತ್ರಣ ಸಂಸ್ಥೆ ‘ಸೆಬಿ’ಯು ನಿರಂತರ ಪ್ರಯತ್ನ ನಡೆಸುತ್ತಿದೆ. 2018ರ ಏಪ್ರಿಲ್‌ ತಿಂಗಳ ಬಳಿಕ ಜಾರಿಗೆ ಬಂದ ಕೆಲವು ನಿಯಮಗಳು ನಿಷ್ಕ್ರಿಯ ಫಂಡ್‌ ಹೂಡಿಕೆ ಕ್ಷೇತ್ರದ ಬೆಳವಣಿಗೆಗೆ ಸಹಾಯಕವಾಗಿವೆ. ಮಾತ್ರವಲ್ಲ ಚಿಲ್ಲರೆ ಹೂಡಿಕೆದಾರರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಿವೆ.

ಏನೇ ಆದರೂ, ಸಕ್ರಿಯ (active funds) ನಿಧಿಗಳ ಹೂಡಿಕೆ ಕ್ಷೇತ್ರದ ಹೆಚ್ಚಿದ ಆಕರ್ಷಣೆ ಹಾಗೂ ಅಭಿವೃದ್ಧಿಯನ್ನು ನಾನು ನಿರಾಕರಿಸಲಾರೆ. ಹಾಗೆ ಮಾಡುವುದು ಆತುರದ ನಿರ್ಧಾರವಾದೀತು. ಆದರೆ, ದೊಡ್ಡ ಫಂಡ್‌ಗಳು ಹೂಡಿಕೆದಾರರ ಗಮನ ಸೆಳೆಯಲು ಸ್ವಲ್ಪ ಹೆಚ್ಚಿನ ಶ್ರಮಪಡಬೇಕಾಗಬಹುದು.‘ಸೆಬಿ’ಯ ಹೊಸ ನಿಯಮಾವಳಿಯ ಕಾರಣದಿಂದ ಪಾರಂಪರಿಕ ಸಕ್ರಿಯ ಫಂಡ್‌ಗಳ ವೆಚ್ಚದ ಅನುಪಾತವೂ ಇಳಿಕೆಯಾಗಿದೆ. ಮುಂದೆ ಇದು ಯಾವ ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ಹೂಡಿಕೆದಾರರು ಈಗ ಸಕ್ರಿಯ ಮತ್ತು ನಿಷ್ಕ್ರಿಯ ಫಂಡ್‌ಗಳಲ್ಲಿ ಯಾವುದನ್ನು ಆಯ್ಕೆ ಮಾಡಬೇಕೆಂಬ ಗೊಂದಲಕ್ಕೆ ಬೀಳಬೇಕಾಗಿಲ್ಲ.

ಸಕ್ರಿಯವಾಗಿ ನಿರ್ವಹಿಸುವ ಹೂಡಿಕೆ ನಿಧಿಯ ವೃತ್ತಿಪರ ನಿರ್ವಾಹಕರೇ ಹೂಡಿಕೆ ಹೇಗೆ ಮಾಡಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಿಷ್ಕ್ರಿಯವಾಗಿ ನಿರ್ವಹಿಸುವ ನಿಧಿಗಳ ಹೂಡಿಕೆ ನಿರ್ಧಾರವು ಮಾರುಕಟ್ಟೆಯ ಸೂಚ್ಯಂಕ ಆಧರಿಸಿರುತ್ತದೆ. ಇಲ್ಲಿ ಹೂಡಿಕೆ ನಿರ್ಧಾರ ಕೈಗೊಳ್ಳುವ ನಿರ್ವಹಣಾ ತಂಡವೇ ಇರುವುದಿಲ್ಲ.

ಇವೆರಡರ ಮಿಶ್ರಣದ ಫಂಡ್‌ಗಳೂ ಈಗ ಲಭ್ಯವಿದ್ದು, ಅವುಗಳ ಸಂಖ್ಯೆ ಹೆಚ್ಚುತ್ತಿದೆ. ಭಾರತವಷ್ಟೇ ಅಲ್ಲ ವಿಶ್ವದ ವಿವಿಧ ರಾಷ್ಟ್ರಗಳ ಹೂಡಿಕೆದಾರರು ಈಚೆಗೆ, ಯಾವುದು ಹೆಚ್ಚು ಗಳಿಕೆ ತಂದುಕೊಡುತ್ತದೋ ಆ ಫಂಡ್‌ನತ್ತ ಮುಖಮಾಡುತ್ತಿರುವುದು ಕಂಡುಬರುತ್ತಿದೆ. ಹಿಂದಿನ ಮೂರರಿಂದ ಐದು ವರ್ಷಗಳ ಅವಧಿಯಲ್ಲಿ ಷೇರುಗಳು ಹೆಚ್ಚು ಗಳಿಕೆ ತಂದುಕೊಟ್ಟಿದ್ದರಿಂದ ಆ ಕಡೆಗೆ ಹೆಚ್ಚಿನ ಹೂಡಿಕೆ ಹರಿದಿದೆ. ಪ್ರಸಕ್ತ ಸಾಲಿನಲ್ಲಿ ರೂಪಾಯಿ ಮೌಲ್ಯ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. ಪರಿಣಾಮವಾಗಿ ಅನೇಕರು ಅಂತರರಾಷ್ಟ್ರೀಯ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಗೆ ಆಸಕ್ತಿ ತೋರಿದ್ದನ್ನೂ ನೋಡಿದ್ದೇವೆ.

ಹಿಂದೊಮ್ಮೆ ಚಿನ್ನದಲ್ಲಿ ಮಾಡಿರುವ ಹೂಡಿಕೆಯು ಹೆಚ್ಚು ಲಾಭ ಗಳಿಸಿದ ನಿದರ್ಶನಗಳಿವೆ. ಇವೆಲ್ಲವೂ ಒಂದು ಚಕ್ರವಿದ್ದಂತೆ. ಚಕ್ರ ಯಾವ ಕಡೆಗೆ ತಿರುವುದೋ ಹೂಡಿಕೆದಾರರು ಆ ದಿಕ್ಕಿನತ್ತ ತಮ್ಮ ಹೂಡಿಕೆಯನ್ನೂ ತಿರುಗಿಸುವುದು ಸಹಜ.

ನಾನು ನೀಡುವ ಸಲಹೆ ಎಂದರೆ, ಹೂಡಿಕೆದಾರರು ಯಾವತ್ತೂ ಬೇರೆಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬೇಕು. ಇದರಿಂದ ಒಂದು ಕ್ಷೇತ್ರದಲ್ಲಾದ ನಷ್ಟವನ್ನು ಇನ್ನೊಂದರಲ್ಲಿ ಆಗಿರುವ ಲಾಭದಿಂದ ಸರಿದೂಗಿಸಲು ಸಾಧ್ಯವಾಗುತ್ತದೆ. ಈಕ್ವಿಟಿ, ನಿಗದಿತ ಆದಾಯ ತರುವ ಹೂಡಿಕೆ ಮತ್ತು ಚಿನ್ನದ ಸಮತೋಲಿತ ಹೂಡಿಕೆಯು ದೀರ್ಘಾವಧಿಯಲ್ಲಿ ಉತ್ತಮ ಫಲಿತಾಂಶ ನೀಡಬಲ್ಲದು.

ಒಟ್ಟಿನಲ್ಲಿ 2018ನೇ ವರ್ಷ ಉದ್ದಿಮೆಯ ಪಾಲಿಗೆ ಒಳ್ಳೆಯ ವರ್ಷವಾಗಿತ್ತು. ಹೂಡಿಕೆದಾರರು ಇನ್ನು ಮುಂದೆಯೂ ಮ್ಯೂಚುವಲ್‌ ಫಂಡ್‌ ಉದ್ದಿಮೆಯಲ್ಲಿ ದೃಢವಾಗಿ ಇರುತ್ತಾರೆ ಎಂಬ ಭಾವನೆ ಈ ವರ್ಷದಲ್ಲಿ ಮೂಡಿದೆ. ಹೆಚ್ಚಿನ ಆದಾಯ ಗಳಿಸಲು ಹೂಡಿಕೆಯ ಪ್ರಮಾಣ ಹೆಚ್ಚಿದ್ದರೆ ಸಾಲದು, ಅದರ ಅವಧಿಯೂ ದೀರ್ಘವಾಗಿರುವುದು ಮುಖ್ಯ ಎಂಬುದನ್ನು ನೆನಪಿನಲ್ಲಿಡೋಣ.

ಅಭಿವೃದ್ಧಿಯ ಗತಿ ಹೆಚ್ಚಳ

ಆರ್ಥಿಕ ಒಳಗೊಳ್ಳುವಿಕೆಯ ನಿರಂತರ ಕ್ರಮದಿಂದಾಗಿ ಡಿಜಿಟಲೀಕರಣದ ನಿಟ್ಟಿನಲ್ಲೂ ದೇಶದಲ್ಲಿ ಈ ವರ್ಷ ಗಮನಾರ್ಹ ಬೆಳವಣಿಗೆಯಾಗಿದೆ. ದೇಶದ ಸಣ್ಣ ಹಳ್ಳಿಗಳಲ್ಲೂ ಆರ್ಥಿಕತೆ ಕುರಿತ ಜಾಗೃತಿ ಉಂಟಾಗಿ, ಹಳ್ಳಿ ಹಾಗೂ ಪೇಟೆಯ ನಡುವಣ ಅಂತರ ಕಡಿಮೆಯಾಗಿದೆ. ಸ್ಮಾರ್ಟ್‌ ಫೋನ್‌ಗಳಿಂದಾಗಿ ಎಲ್ಲಿಂದಲೇ ಆದರೂ, ಯಾವ ಕ್ಷಣದಲ್ಲೇ ಆದರೂ ಹೂಡಿಕೆ ಮಾಡಲು ಸಾಧ್ಯವಾಗುತ್ತಿದೆ. ಹಣದ ಪಾವತಿಗೆ ಸಹಾಯವಾಗುವಂತೆ ಅನೇಕ ಮೊಬೈಲ್‌ ಆ್ಯಪ್‌ಗಳು ಬಂದಿವೆ. ಇಂಥ ಅನೇಕ ಉಪಕ್ರಮಗಳು ಅಭಿವೃದ್ಧಿಯ ಗತಿಯನ್ನು ಹೆಚ್ಚಿಸಲು ಸಹಕಾರಿಯಾಗಿವೆ.

ಆರ್ಥಿಕ ಸಲಹೆಗಾರರು ಹಾಗೂ ಹಣಕಾಸು ಉತ್ಪನ್ನಗಳ ವಿತರಕರು ಸಹ ಈ ಚೇತರಿಕೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಮಾರುಕಟ್ಟೆಯು ತೀವ್ರ ಏರುಪೇರು ದಾಖಲಿಸುತ್ತಿರುವಾಗ, ಆತಂಕಕ್ಕೆ ಒಳಗಾಗದೆ, ಹೂಡಿಕಾ ಕ್ಷೇತ್ರದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವಂತೆ ಮತ್ತು ಹೂಡಿಕೆಯ ಪ್ರಮಾಣ ಹೆಚ್ಚಿಸುವಂತೆ ಸಲಹೆ ನೀಡುತ್ತ ಇವರು ಹೂಡಿಕೆದಾರರಲ್ಲಿ ಧೈರ್ಯ ತುಂಬಿದ್ದಾರೆ. ಮಾರುಕಟ್ಟೆ ಏರುಪೇರಿನ ಬಗ್ಗೆ ನಾವು ಯಾವತ್ತೂ ಎಚ್ಚರದಿಂದಿರುವುದು ಅಗತ್ಯ. ಒಳ್ಳೆಯ ಆರ್ಥಿಕ ಸಲಹೆಗಾರರಿದ್ದರೆ ಎಂಥ ಸಂದರ್ಭದಲ್ಲೂ ಹೂಡಿಕೆ ನಷ್ಟವಾಗದಂತೆ ನೋಡಿಕೊಳ್ಳಲು ಸಾಧ್ಯವಿದೆ.

(ಲೇಖಕ: ‘ಡಿಎಸ್‌ಪಿ ಎಂಎಫ್‌’ನ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.