ADVERTISEMENT

ಹೂಡಿಕೆದಾರರ ಸಂಪತ್ತು ₹ 4 ಲಕ್ಷ ಕೋಟಿ ವೃದ್ಧಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 16:30 IST
Last Updated 4 ಜೂನ್ 2022, 16:30 IST

ಬೆಂಗಳೂರು: ದೇಶದ ಷೇರುಪೇಟೆಗಳ ವಾರದ ವಹಿವಾಟು ಸಕಾರಾತ್ಮಕವಾಗಿ ಅಂತ್ಯವಾಗಿದೆ. ಮುಂಬೈ ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 4 ಲಕ್ಷ ಕೋಟಿ ಹೆಚ್ಚಾಗಿದೆ. ಇದರಿಂದ ಒಟ್ಟಾರೆ ಬಂಡವಾಳ ಮೌಲ್ಯವು ₹ 257 ಲಕ್ಷ ಕೋಟಿಗೆ ತಲುಪಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ವಾರದ ವಹಿವಾಟಿನಲ್ಲಿ 885 ಅಂಶ ಏರಿಕೆ ಕಂಡಿದ್ದರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 232 ಅಂಶ ಹೆಚ್ಚಾಗಿದೆ.

ಮೇ ತಿಂಗಳ ಜಿಎಸ್‌ಟಿ ಸಂಗ್ರಹ ಶೇ 44ರಷ್ಟು ಹೆಚ್ಚಾಗಿರುವುದು, ತಯಾರಿಕಾ ವಲಯದ ಬೆಳವಣಿಗೆಯು 11ನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಮಟ್ಟದಲ್ಲಿಯೇ ಇರುವುದು ಷೇರುಪೇಟೆ ವಹಿವಾಟು ಹೆಚ್ಚಳಕ್ಕೆ ಬೆಂಬಲ ನೀಡಿದವು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ADVERTISEMENT

ಆರ್‌ಐಎಲ್‌ ಗಳಿಕೆ ಹೆಚ್ಚಳ: ವಾರದ ವಹಿವಾಟಿನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ (ಆರ್‌ಐಎಲ್‌) ಬಂಡವಾಳ ಮೌಲ್ಯವು ₹ 1.38 ಲಕ್ಷ ಕೋಟಿ ಹೆಚ್ಚಾಗಿದ್ದು, ಒಟ್ಟಾರೆ ಬಂಡವಾಳ ಮೌಲ್ಯ ₹ 18.80 ಲಕ್ಷ ಕೋಟಿಗೆ ಏರಿಕೆ ಆಗಿದೆ.

ಟಿಸಿಎಸ್‌ ಮಾರುಕಟ್ಟೆ ಮೌಲ್ಯದಲ್ಲಿ ₹ 64,618 ಕೋಟಿ ಹೆಚ್ಚಾಗಿದ್ದು, ಒಟ್ಟಾರೆ ಮೌಲ್ಯವು ₹ 12.58 ಲಕ್ಷ ಕೋಟಿಗೆ ತಲುಪಿದೆ. ಅದೇ ರೀತಿ, ಇನ್ಫೊಸಿಸ್‌, ಐಸಿಐಸಿಐ ಬ್ಯಾಂಕ್‌ ಮತ್ತು ಭಾರ್ತಿ ಏರ್‌ಟೆಲ್‌ ಕಂಪನಿಗಳ ಬಂಡವಾಳ ಮೌಲ್ಯದಲ್ಲಿಯೂ ಏರಿಕೆ ಕಂಡುಬಂದಿದೆ.

ಮಾರುಕಟ್ಟೆ ಬಂಡವಾಳ ಮೌಲ್ಯದ ಲೆಕ್ಕದಲ್ಲಿ ದೇಶದ ಅತ್ಯಂತ ಮೌಲ್ಯಯುತ ಕಂಪನಿಗಳ ಸಾಲಿನಲ್ಲಿ ಸದ್ಯ ರಿಲಯನ್ಸ್‌ ಮೊದಲ ಸ್ಥಾನದಲ್ಲಿದೆ. ಟಿಡಿಎಸ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.