
ನವದೆಹಲಿ: ಆಡಳಿತ ಮಂಡಳಿಯು ಕಚೇರಿಯಲ್ಲಿ ಬಲವಂತವಾಗಿ ಹೇರಿರುವ ಕ್ರಮಗಳನ್ನು ವಾಪಸ್ ಪಡೆಯುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಅಧಿಕಾರಿಗಳ ಸಂಘವು (ಐಒಬಿಒಎ) ಮಾರ್ಚ್ 2ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಆಡಳಿತ ಮಂಡಳಿಯು ಕಚೇರಿಯ ಕೆಲಸದ ಸಮಯ ಮುಗಿದ ಬಳಿಕವೂ ಸಿಬ್ಬಂದಿಯಿಂದ ಕೆಲಸ ಮಾಡಿಸಿಕೊಳ್ಳುತ್ತಿರುವುದು, ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ಹೇಳಿದ್ದು, ಮುಷ್ಕರಕ್ಕೆ ಬೆಂಬಲ ನೀಡಿದೆ.
ಈ ಮುಷ್ಕರದ ಭಾಗವಾಗಿ ಬ್ಯಾಂಕ್‌ನ ಪ್ರಾದೇಶಿಕ ಕೇಂದ್ರಗಳ ಬಳಿ ಫೆಬ್ರುವರಿ 23ರಂದು ಪ್ರತಿಭಟನೆ ಮತ್ತು 26ರಂದು ಧರಣಿ ನಡೆಸಲಾಗುವುದು ಎಂದು ಐಒಬಿಒಎ ತಿಳಿಸಿದೆ.
ಕಚೇರಿಗಳಲ್ಲಿ ನ್ಯಾಯಬದ್ಧವಾದ ಕೆಲಸದ ಅವಧಿ ಜಾರಿಗೊಳಿಸಬೇಕು. ಪಾರದರ್ಶಕ ಆಡಳಿತವನ್ನು ಜಾರಿಗೊಳಿಸಬೇಕು, ಬ್ಯಾಂಕ್‌ನಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.