
ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಹಾಗೂ ಭಾರತದ ಇತರ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಸಂಪೂರ್ಣವಾಗಿ ಕೈಬಿಡುವ ಸಾಧ್ಯತೆ ಇಲ್ಲ.
ಅಮೆರಿಕವು ನಿರ್ಬಂಧ ವಿಧಿಸಿರುವುದು ರಷ್ಯಾದ ಕೆಲವು ಕಂಪನಿಗಳ ಮೇಲೆ; ನಿರ್ಬಂಧವು ರಷ್ಯಾದ ಕಚ್ಚಾ ತೈಲದ ಮೇಲೆ ಇಲ್ಲ. ಹೀಗಾಗಿ ನಿರ್ಬಂಧ ಇಲ್ಲದ ಕಂಪನಿಗಳ ಮೂಲಕ ಖರೀದಿಯು ಮುಂದುವರಿಯುವ ಸಾಧ್ಯತೆ ಇದೆ.
ರೊಸ್ನೆಫ್ಟ್ ಸೇರಿ ರಷ್ಯಾದ ನಾಲ್ಕು ಕಂಪನಿಗಳ ಮೇಲೆ ಇದುವರೆಗೆ ನಿರ್ಬಂಧ ಹೇರಲಾಗಿದೆ. ಆದರೆ ರೊಸ್ನೆಫ್ಟ್ ಕಂಪನಿಯು ತೈಲ ಉತ್ಪಾದಕ ಅಲ್ಲ; ಅದು ಉತ್ಪಾದಕರಿಂದ ಕಚ್ಚಾ ತೈಲವನ್ನು ಗ್ರಾಹಕರಿಗೆ ಒದಗಿಸಿಕೊಡುವ ಕಂಪನಿ. ರೊಸ್ನೆಫ್ಟ್ ಮಾಡುವ ಕೆಲಸವನ್ನು ರಷ್ಯಾದಲ್ಲಿ ಇತರ ಕಂಪನಿಗಳು ಮಾಡಬಹುದು, ಆಗ ಕಚ್ಚಾ ತೈಲದ ಪೂರೈಕೆಗೆ ಅಡ್ಡಿ ಇರುವುದಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ರೊಸ್ನೆಫ್ಟ್ ಮತ್ತು ಲುಕಾಯಿಲ್ ಕಂಪನಿಗಳ ಮೇಲೆ ನಿರ್ಬಂಧವಿದೆ. ರಷ್ಯಾದ ಕಚ್ಚಾ ತೈಲದ ಮೇಲೆ ನಿರ್ಬಂಧ ಇಲ್ಲ. ನಿರ್ಬಂಧಕ್ಕೆ ಗುರಿಯಾಗಿರದ ರಷ್ಯಾದ ಇತರ ಕಂಪನಿಗಳಿಂದ ಖರೀದಿಯನ್ನು ಪರಿಗಣಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
‘ನಿರ್ಬಂಧದ ನಿಯಮಗಳನ್ನು ಪಾಲಿಸಲಾಗುತ್ತದೆ. ಆದರೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ನಾವು ನಿಲ್ಲಿಸುವುದಿಲ್ಲ. ರಷ್ಯಾದ ಕಚ್ಚಾ ತೈಲದ ಮೇಲೆ ನಿರ್ಬಂಧ ಇಲ್ಲ’ ಎಂದು ಐಒಸಿ ನಿರ್ದೇಶಕ ಅನುಜ್ ಜೈನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.