ADVERTISEMENT

ಐಪಿಒ: ₹1.6 ಲಕ್ಷ ಕೋಟಿ ಸಂಗ್ರಹ

ಪಿಟಿಐ
Published 22 ಡಿಸೆಂಬರ್ 2024, 14:00 IST
Last Updated 22 ಡಿಸೆಂಬರ್ 2024, 14:00 IST
ಐಪಿಒ
ಐಪಿಒ   

ನವದೆಹಲಿ: ಪ್ರಸಕ್ತ ವರ್ಷದ ಇದುವರೆಗೆ ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಮೂಲಕ ಕಂಪನಿಗಳು ₹1.6 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಿವೆ.

ಆರ್ಥಿಕ ಬೆಳವಣಿಗೆ, ಅನುಕೂಲಕರ ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಸೆಬಿಯ ನಿಯಮಗಳಿಂದ ಬಂಡವಾಳ ಸಂಗ್ರಹದಲ್ಲಿ ಹೆಚ್ಚಳವಾಗಿದೆ. 2025ರಲ್ಲೂ ಬಂಡವಾಳ ಸಂಗ್ರಹ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಇದು ಷೇರು ವಿತರಕರ ವಿಶ್ವಾಸ ಹೆಚ್ಚಿಸಿದ್ದಲ್ಲದೇ, ಹೂಡಿಕೆದಾರರ ಉತ್ಸಾಹ ಕೂಡ ಹೆಚ್ಚಳವಾಗಿರುವುದನ್ನು ಪ್ರತಿಬಿಂಬಿಸುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಈ ವರ್ಷ ಹುಂಡೈ ಮೋಟರ್ ಇಂಡಿಯಾ ಅತಿ ಹೆಚ್ಚು ₹27,870 ಕೋಟಿ ಬಂಡವಾಳ ಸಂಗ್ರಹಿಸಿದೆ. ಸ್ವಿಗ್ಗಿ ₹11,327 ಕೋಟಿ, ಎನ್‌ಟಿಪಿಸಿ ಗ್ರೀನ್‌ ಎನರ್ಜಿ ₹10 ಸಾವಿರ ಕೋಟಿ, ಬಜಾಜ್‌ ಹೌಸಿಂಗ್‌ ಫೈನಾನ್ಸ್‌ ₹6,560 ಕೋಟಿ ಮತ್ತು ಓಲಾ ಎಲೆಕ್ಟ್ರಿಕ್‌ ಮೊಬಿಲಿಟಿ ₹6,145 ಕೋಟಿ ಬಂಡವಾಳ ಸಂಗ್ರಹಿಸಿವೆ.

ADVERTISEMENT

2023ರಲ್ಲಿ ದೊಡ್ಡ, ಮಧ್ಯಮ ಮತ್ತು ಸಣ್ಣ ಬಂಡವಾಳದ ಕಂಪನಿಗಳ ಸರಾಸರಿ ಹಂಚಿಕೆ ಗಾತ್ರ ₹867 ಕೋಟಿ ಇತ್ತು. ಇದು 2024ರಲ್ಲಿ ₹1,700 ಕೋಟಿಯಷ್ಟಾಗಿದೆ. ಡಿಸೆಂಬರ್‌ನಲ್ಲಿ ಕನಿಷ್ಠ 15 ಐಪಿಒ ಮಾರುಕಟ್ಟೆಗೆ ಪ್ರವೇಶಿಸಿದವು.

‘ಜನರ ಭಾಗವಹಿಸುವಿಕೆ ಹೆಚ್ಚಳ, ಸದೃಢವಾದ ದೇಶೀಯ ಒಳಹರಿವು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಸಕ್ರಿಯ ಪಾಲ್ಗೊಳ್ಳುವಿಕೆ, ಖಾಸಗಿ ಬಂಡವಾಳ ಹೆಚ್ಚಳ, ಮೂಲಸೌಕರ್ಯ ಮತ್ತು ಪ್ರಮುಖ ಕ್ಷೇತ್ರಗಳ ಮೇಲೆ ಸರ್ಕಾರದ ಬಂಡವಾಳ ವೆಚ್ಚದ ಹೆಚ್ಚಳವು ಸಂಗ್ರಹ ಹೆಚ್ಚಳವಾಗಲು ಕಾರಣವಾಗಿದೆ’ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

75 ಐಪಿಒಗಳು ಅನುಮೋದನೆ ಸೇರಿ ವಿವಿಧ ಹಂತಗಳಲ್ಲಿ ಇವೆ. ಇವು 2025ರಲ್ಲಿ ಮಾರುಕಟ್ಟೆಗೆ ಪ್ರವೇಶಿಸುವ ನಿರೀಕ್ಷೆ ಇದೆ. ಇದರ ಮೊತ್ತ ₹2.5 ಲಕ್ಷ ಕೋಟಿ ದಾಟಲಿದೆ ಎಂದು ಈಕ್ವಿರಸ್‌ನ ಈಕ್ವಿಟಿ ಕ್ಯಾಪಿಟಲ್ ಮಾರ್ಕೆಟ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಸ್ಥ ಮುನೀಶ್ ಅಗರ್ವಾಲ್ ಹೇಳಿದ್ದಾರೆ.

2023ರಲ್ಲಿ 57 ಕಂಪನಿಗಳು ಐಪಿಒ ಮೂಲಕ ₹49,436 ಕೋಟಿ ಸಂಗ್ರಹಿಸಿದ್ದವು. ಈ ಬಾರಿ ಇಲ್ಲಿಯವರೆಗೆ 90 ಕಂಪನಿಗಳು ಐಪಿಒ ಮೂಲಕ ₹1.6 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.