ADVERTISEMENT

ಸಲ್ಲಿಕೆಯಾಗದ ಜೀವ ವಿಮಾ ನಿಗಮದ ಐಪಿಒ ಪ್ರಸ್ತಾವ

ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಹೇಳಿಕೆ

ಪಿಟಿಐ
Published 18 ಫೆಬ್ರುವರಿ 2020, 19:45 IST
Last Updated 18 ಫೆಬ್ರುವರಿ 2020, 19:45 IST
ಎಲ್‌ಐಸಿ
ಎಲ್‌ಐಸಿ   

ಮುಂಬೈ: ಜೀವ ವಿಮೆಯ ದೈತ್ಯ ಸಂಸ್ಥೆಯಾಗಿರುವ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ನೀಡಿಕೆ (ಐಪಿಒ) ಸಂಬಂಧ ಯಾವುದೇ ಪ್ರಸ್ತಾವ ಇದುವರೆಗೆ ಸಲ್ಲಿಕೆಯಾಗಿಲ್ಲ ಎಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ತಿಳಿಸಿದೆ.

‘ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಿ ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಯಾವುದೇ ಕಂಪನಿಯಲ್ಲಿ ಉತ್ತಮ ಕಾರ್ಪೊರೇಟ್‌ ಆಡಳಿತ ಮತ್ತು ಪಾರದರ್ಶಕತೆ ಕಂಡು ಬರಲಿದೆ. ಎಲ್‌ಐಸಿಯ ಐಪಿಒ ಪ್ರಸ್ತಾವ ಇನ್ನೂ ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿಲ್ಲ’ ಎಂದು ‘ಐಆರ್‌ಡಿಎಐ’ ಅಧ್ಯಕ್ಷ ಎಸ್‌. ಸಿ. ಖುಂಟಿಯಾ ಹೇಳಿದ್ದಾರೆ.

‘ಐಪಿಒ ಮುಂಚೆ ಎಲ್‌ಐಸಿಯ ವಹಿವಾಟಿನ ಸ್ವರೂಪದಲ್ಲಿ ಮರು ಹೊಂದಾಣಿಕೆ ಮಾಡುವ ಅಗತ್ಯ ಇದೆಯೇ‘ ಎನ್ನುವ ಪ್ರಶ್ನೆಗೆ, ‘ಕೇಂದ್ರ ಸರ್ಕಾರವೇ ಅದನ್ನು ಕಾರ್ಯಗತಗೊಳಿಸುತ್ತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಪ್ರತಿಯೊಂದು ವಿಮೆ ಕಂಪನಿಯು ಷೇರುಪೇಟೆಯಲ್ಲಿ ವಹಿವಾಟು ನಡೆಸುವುದು ಉತ್ತಮ ಚಿಂತನೆಯಾಗಿದೆ. ವಿಮೆ ಸಂಸ್ಥೆಗಳು ಈ ಹಾದಿಯಲ್ಲಿ ಮುನ್ನಡೆಯಲು ಪ್ರಾಧಿಕಾರವು ಉತ್ತೇಜನ ನೀಡಲಿದೆ. ಆದರೆ, ಅದನ್ನು ಕಡ್ಡಾಯ ಮಾಡುವುದಿಲ್ಲ. ಸಣ್ಣ ಕಂಪನಿಗಳು ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸುವ ಮಟ್ಟಕ್ಕೆ ಇನ್ನೂ ಬೆಳೆದಿಲ್ಲ. ಯಾವುದೇ ಕಂಪನಿಯು ವಹಿವಾಟು ಆರಂಭಿಸಿದ 10 ವರ್ಷಗಳಲ್ಲಿ ಷೇರುಪೇಟೆ ಪ್ರವೇಶಿಸುವ ಮಟ್ಟಕ್ಕೆ ಬೆಳೆಯಬೇಕು.

‘ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಎರಡನೇಯ ಪರ್ಯಾಯ ಆದಾಯ ತೆರಿಗೆ ಯೋಜನೆಯಿಂದ ಜೀವ ವಿಮೆ ಉದ್ದಿಮೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಕಂಡು ಬರುವುದಿಲ್ಲ. ತೆರಿಗೆ ವಿನಾಯ್ತಿ ಪಡೆಯಲು ಜೀವ ವಿಮೆ ಪಾಲಿಸಿಗಳಲ್ಲಿ ಈ ಮೊದಲಿನಂತೆ ಹಣ ಹೂಡಿಕೆ ಮಾಡಲು ಅವಕಾಶ ಇದ್ದೇ ಇದೆ.

‘ಜೀವ ವಿಮೆ ಕಂಪನಿಗಳು ಹೆಚ್ಚು ಮಾರಾಟಗೊಳ್ಳದ, ಕೇವಲ ಸಂಖ್ಯೆ ಹೆಚ್ಚಳಕ್ಕೆ ಕೊಡುಗೆ ನೀಡುವ ನಷ್ಟಕ್ಕೆ ಕಾರಣವಾಗುವ ವಿಮೆ ಉತ್ಪನ್ನಗಳನ್ನು ಕೈಬಿಡಬೇಕು. ಉತ್ತಮ ಲಾಭ ತರುವ ಉತ್ಪನ್ನಗಳ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಬೇಕು. ಕಂಪನಿಗಳ ವಹಿವಾಟು ಸುಸ್ಥಿರಗೊಳ್ಳಲು ನಷ್ಟಕ್ಕೆ ಗುರಿಯಾಗಬಾರದು. ಅತಿಯಾದ ಲಾಭವನ್ನೂ ಗಳಿಸಬಾರದು ಎನ್ನುವುದು ಪ್ರಾಧಿಕಾರದ ಧೋರಣೆಯಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.