ರಾಯಿಟರ್ಸ್ ಚಿತ್ರ
ನವದೆಹಲಿ: ಇಸ್ರೇಲ್–ಇರಾನ್ ಸಂಘರ್ಷ ತೀವ್ರಗೊಂಡಿರುವುದರಿಂದಾಗಿ, ಇರಾನ್‌ಗೆ ರಫ್ತಾಗಬೇಕಿದ್ದ ಭಾರಿ ಪ್ರಮಾಣದ ಬಾಸ್ಮತಿ ಅಕ್ಕಿಯು ದೇಶದ ಬಂದರುಗಳಲ್ಲೇ ಸಿಲುಕಿದೆ ಎಂದು ಭಾರತೀಯ ಅಕ್ಕಿ ರಫ್ತುದಾರರ ಸಂಘ ಸೋಮವಾರ ಹೇಳಿದೆ.
ಇರಾನ್‌ಗೆ ಸಾಗಿಸಲಾಗುತ್ತಿದ್ದ ಸುಮಾರು 1 ಲಕ್ಷ ಟನ್‌ನಷ್ಟು ಬಾಸ್ಮತಿ ಅಕ್ಕಿ ಇರುವ ಹಡಗುಗಳು ಸದ್ಯ ಭಾರತದ ಬಂದರುಗಳಲ್ಲೇ ಉಳಿದಿವೆ. ಭಾರತ ರಫ್ತು ಮಾಡುವ ಒಟ್ಟು ಬಾಸ್ಮತಿ ಅಕ್ಕಿಯಲ್ಲಿ ಶೇ 18–20ರಷ್ಟು ಪಾಲನ್ನು ಇರಾನ್ ಹೊಂದಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ಗೋಯಲ್ ತಿಳಿಸಿದ್ದಾರೆ.
ಗುಜರಾತ್‌ನ ಕಾಂಡ್ಲಾ ಹಾಗೂ ಮುಂದ್ರಾ ಬಂದರುಗಳಲ್ಲಿ ಸರಕು ಸಾಗಣೆ ಹಡಗುಗಳು ಸಿಲುಕಿವೆ. ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸದ್ಯ ಉದ್ವಿಗ್ನೆತೆ ಉಲ್ಪಣಿಸಿದೆ. ಇರಾನ್‌ಗೆ ಹೋಗುವ ಹಡಗುಗಳಿಗೆ ಯಾವುದೇ ರೀತಿಯ ವಿಮಾ ಸೌಲಭ್ಯವಿಲ್ಲ ಎಂದು ಗೋಯಲ್ ಹೇಳಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸಂಘರ್ಷಗಳು ಪ್ರಮಾಣಿತ ಸಾಗಣೆ ವಿಮಾ ಪಾಲಿಸಿಗಳ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ರಫ್ತುದಾರರು ಸರಕುಗಳನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದೂ ವಿವರಿಸಿದ್ದಾರೆ.
ಹಡಗುಗಳ ಸಂಚಾರದಲ್ಲಿನ ವಿಳಂಬ, ಪಾವತಿಯ ಅನಿಶ್ಚಿತತೆಯು ಆರ್ಥಿಕ ಸಂಕಷ್ಟ ಸೃಷ್ಟಿಸಲಿದೆ ಎಂದಿರುವ ಗೋಯಲ್, ಬಾಸ್ಮತಿ ಅಕ್ಕಿ ಬೆಲೆಯು ದೇಶೀಯ ಮಾರುಕಟ್ಟೆಯಲ್ಲಿ ಈಗಾಗಲೇ ₹ 4 ರಿಂದ ₹ 5 ರಷ್ಟು ಕುಸಿದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.