ADVERTISEMENT

ಜೆಟ್‌: ಇನ್ನಷ್ಟು ವಿಮಾನ ಕಡಿತ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 19:04 IST
Last Updated 3 ಏಪ್ರಿಲ್ 2019, 19:04 IST
ಖರೋಲಾ
ಖರೋಲಾ   

ನವದೆಹಲಿ: ‘ಸದ್ಯ ಜೆಟ್‌ ಏರ್‌ವೇಸ್‌ ಸಂಸ್ಥೆಯ 28 ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿದ್ದು, ಅವುಗಳಲ್ಲಿ 15 ದೇಶಿ ಮಾರ್ಗದಲ್ಲಿ ಸಂಚರಿಸುತ್ತಿವೆ’ ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ಪ್ರದೀಪ್‌ ಸಿಂಗ್‌ ಖರೋಲಾ ತಿಳಿಸಿದ್ದಾರೆ.

ಮಂಗಳವಾರ 28 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಖರೋಲಾ ಮಾಹಿತಿ ನೀಡಿದ್ದರು.

ಆದರೆ,ಬಾಡಿಗೆ ಪಾವತಿಸಲು ಸಾಧ್ಯವಾಗದೆ 15 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿರುವುದಾಗಿ ಸಂಸ್ಥೆಯು ಷೇರುಪೇಟೆಗೆ ಮಾಹಿತಿ ನೀಡಿತ್ತು. ಹೀಗಾಗಿ ಬುಧವಾರ 15ಕ್ಕಿಂತ ಕಡಿಮೆ ವಿಮಾನಗಳು ಮಾತ್ರವೇ ಕಾರ್ಯಾಚರಣೆ ನಡೆಸುತ್ತಿವೆ ಎಂದು ಖರೋಲಾ ತಿಳಿಸಿದ್ದರು.

ADVERTISEMENT

ಮತ್ತೆ ಸ್ಪಷ್ಟನೆ ನೀಡಿರುವ ಅವರು, ‘ಒಟ್ಟಾರೆ 28 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ’ ಎಂದು ತಿಳಿಸಿದ್ದಾರೆ.

ಸಂಸ್ಥೆಯ ಬಳಿ 119 ವಿಮಾನಗಳಿದ್ದು,ಬಾಡಿಗೆ ಪಾವತಿಸಲು ಸಾಧ್ಯವಾಗದೇ ಹಾರಾಟ ನಿಲ್ಲಿಸಿರುವ ವಿಮಾನಗಳ ಸಂಖ್ಯೆ 69ಕ್ಕೆ ಏರಿಕೆಯಾಗಿದೆ.

ಸಂಸ್ಥೆಗೆ ಬಂಡವಾಳ ನೆರವು ನೀಡುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯ ಬ್ಯಾಂಕ್‌ಗಳು ಮತ್ತು ಜೆಟ್‌ ಆಡಳಿತ ಮಂಡಳಿಗೆ ಸಂಬಂಧಿಸಿದ್ದು, ಚರ್ಚೆ ನಡೆಯುತ್ತಿದೆ’ ಎಂದಿದ್ದಾರೆ.

‘ಸಂಸ್ಥೆಯ ಅಂತರರಾಷ್ಟ್ರೀಯ ಕಾರ್ಯಾಚರಣೆ ಸಾಮರ್ಥ್ಯದ ಬಗ್ಗೆ ಪರಿಶೀಲನೆಯ ಅಗತ್ಯವಿದೆ’ ಎಂದೂ ಖರೋಲಾ ಹೇಳಿದ್ದಾರೆ.

‘ಅಂತರರಾಷ್ಟ್ರೀಯ ಕಾರ್ಯಾಚರಣೆಯ ಮಾನದಂಡಕ್ಕೆ ಅಗತ್ಯ ಇರುವ ವಿಮಾನಗಳನ್ನು ಹೊಂದಿದ್ದು,ಹಾರಾಟದ ಅವಧಿಯನ್ನು ಕಡಿಮೆಗೊಳಿಸಲಾಗಿದೆಯಷ್ಟೆ’ ಎಂದು ಸಂಸ್ಥೆಯ ವಕ್ತಾರರೊಬ್ಬರು ಸ್ಪಷ್ಟಪಡಿಸಿದ್ದಾರೆ.

ಬ್ಯಾಂಕ್‌ಗಳ ಒಕ್ಕೂಟ ಮುಂದಿಟ್ಟಿದ್ದ ಒಪ್ಪಂದಕ್ಕೆ ಸಂಸ್ಥೆಯ ಆಡಳಿತ ಮಂಡಳಿಮಾರ್ಚ್‌ 25ರಂದು ಒಪ್ಪಿಗೆ ಸೂಚಿಸಿತ್ತು. ಆ ಪ್ರಕಾರ ಸಂಸ್ಥೆಯ ನಿಯಂತ್ರಣವನ್ನು ಬ್ಯಾಂಕ್‌ಗಳು ತಮ್ಮ ಸುಪರ್ದಿಗೆ ಪಡೆದು ₹ 1,500 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.