ನವದೆಹಲಿ: ಜಿಯೊ ದೂರಸಂಪರ್ಕ ಸೇವಾ ಕಂಪನಿಯನ್ನು 2016ರಲ್ಲಿ ಆರಂಭಿಸಿದ್ದುದು ತಮ್ಮ ಜೀವನದಲ್ಲಿ ತೆಗೆದುಕೊಂಡ ಅತಿದೊಡ್ಡ ಸವಾಲು ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ.
ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನಕ್ಕೆ ಭಾರತದ ಸಿದ್ಧವಾಗಿಲ್ಲದ ಕಾರಣ ರಿಲಯನ್ಸ್ ಕಂಪನಿಯು ತನ್ನ ಕೋಟ್ಯಂತರ ರೂಪಾಯಿಗಳನ್ನು 4ಜಿ ಮೊಬೈಲ್ ನೆಟ್ವರ್ಕ್ ಆರಂಭಿಸಲು ವಿನಿಯೋಗಿಸುವುದು ಹಣಕಾಸಿನ ದೃಷ್ಟಿಯಿಂದ ಸೂಕ್ತವಲ್ಲ ಎಂದು ವಿಶ್ಲೇಷಕರು ಭಾವಿಸಿದ್ದರು ಎಂದು ‘ಮಕಿನ್ಸೀ ಆ್ಯಂಡ್ ಕೊ’ಗೆ ನೀಡಿರುವ ಸಂದರ್ಶನದಲ್ಲಿ ಅಂಬಾನಿ ಅವರು ಹೇಳಿದ್ದಾರೆ.
‘ಆದರೆ ನಾವು ಹೆಚ್ಚು ಹಣ ಸಂಪಾದಿಸಲಿಕ್ಕಿಲ್ಲ. ಹಾಗಾದರೆ ಪರವಾಗಿಲ್ಲ. ಏಕೆಂದರೆ ಇದು ನಮ್ಮದೇ ಹಣ. ಈ ಹೂಡಿಕೆಯು ನಾವು ಭಾರತದಲ್ಲಿ ಮಾಡುವ ಅತ್ಯುತ್ತಮ ಪರೋಪಕಾರ ಆಗುತ್ತದೆ. ನಾವು ಭಾರತವನ್ನು ಡಿಜಿಟೈಸ್ ಮಾಡಿದಂತಾಗುತ್ತದೆ ಆ ಮೂಲಕ ದೇಶವನ್ನು ಬದಲಾಯಿಸಿದಂತೆ ಆಗುತ್ತದೆ ಎಂದು ನಾನು ನಮ್ಮ ಆಡಳಿತ ಮಂಡಳಿಗೆ ಆಗ ಹೇಳಿದ್ದೆ’ ಎಂದು ಅಂಬಾನಿ ತಿಳಿಸಿದ್ದಾರೆ.
ಭಾರತದಲ್ಲಿ ಜಿಯೊ ಸೇವೆ ಶುರುವಾಗುವ ಮೊದಲು ಮೊಬೈಲ್ ಇಂಟರ್ನೆಟ್ ಶುಲ್ಕ ದುಬಾರಿ ಆಗಿತ್ತು. ಜಿಯೊ ಸೇವೆ ಆರಂಭವಾದ ನಂತರದಲ್ಲಿ ದೂರಸಂಪರ್ಕ ವಲಯದಲ್ಲಿ ದರಸಮರ ಶುರುವಾಯಿತು ಇಂಟರ್ನೆಟ್ ಸೇವೆಗಳ ಶುಲ್ಕ ಗಣನೀಯವಾಗಿ ಕಡಿಮೆ ಆಯಿತು. ‘...2027ರಲ್ಲಿ ರಿಲಯನ್ಸ್ ಕಂಪನಿಯು ಸ್ವರ್ಣ ಮಹೋತ್ಸವ ಆಚರಿಸಲಿದೆ. ರಿಲಯನ್ಸ್ ಕಂಪನಿಯು ಭಾರತ ಮತ್ತು ಮನುಕುಲಕ್ಕೆ 100 ವರ್ಷಗಳ ನಂತರವೂ ಸೇವೆ ಒದಗಿಸಬೇಕು ಎಂಬುದು ನನ್ನ ಬಯಕೆ. ಅದು ಸಾಧ್ಯವಾಗುತ್ತದೆ ಎಂಬುದು ನನ್ನ ವಿಶ್ವಾಸ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.