ಬೆಂಗಳೂರು: ಜನಪ್ರಿಯ ಒಟಿಟಿ ‘ನೆಟ್‌ಫ್ಲಿಕ್ಸ್’ ಚಂದಾದಾರಿಕೆ ಸಿಗುವ ಎರಡು ಪ್ರಿಪೇಯ್ಡ್ ಯೋಜನೆಗಳನ್ನು ಜಿಯೊ ಬಿಡುಗಡೆ ಮಾಡಿದೆ. ₹1,099 ಬೆಲೆಯ ಯೋಜನೆಯು ಗ್ರಾಹಕರಿಗೆ ದಿನಕ್ಕೆ 2 ಜಿ.ಬಿ ಡೇಟಾ ಜೊತೆ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಕೂಡ ನೀಡುತ್ತದೆ.
₹1,499ರ ಯೋಜನೆಯು ದಿನಕ್ಕೆ 3 ಜಿ.ಬಿ ಡೇಟಾ ಹಾಗೂ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಒದಗಿಸುತ್ತದೆ. ಎರಡೂ ಯೋಜನೆಗಳ ಮಾನ್ಯತೆ 84 ದಿನಗಳು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಜಿಯೊ ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಲಭ್ಯವಿದೆ. ಆದರೆ, ಪ್ರಿಪೇಯ್ಡ್ ಯೋಜನೆಗಳಲ್ಲಿ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಸಿಗುತ್ತಿರುವುದು ಇದೇ ಮೊದಲು ಎಂದು ಕಂಪನಿ ಹೇಳಿದೆ.
‘ನಮ್ಮ ಗ್ರಾಹಕರಿಗೆ ವಿಶ್ವದರ್ಜೆಯ ಸೇವೆಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ನೆಟ್‌ಫ್ಲಿಕ್ಸ್‌ನಂತಹ ಜಾಗತಿಕ ಪಾಲುದಾರರೊಂದಿಗೆ ನಮ್ಮ ಸಹಭಾಗಿತ್ವವು ಬಲವಾಗಿ ಬೆಳೆದಿದೆ’ ಎಂದು ಈ ಯೋಜನೆ ಬಿಡುಗಡೆ ವೇಳೆ ಜಿಯೊ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಸಿಇಒ ಕಿರಣ್ ಥಾಮಸ್ ಹೇಳಿದ್ದಾರೆ.
₹1,499ರ ಯೋಜನೆ ಬಳಸಿ ಟಿ.ವಿ ಅಥವಾ ಲ್ಯಾಪ್‌ಟಾಪ್ ಮೂಲಕವೂ ನೆಟ್‌ಫ್ಲಿಕ್ಸ್ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.