ಬೆಂಗಳೂರು/ನವದೆಹಲಿ: ಜಿಯೊ ಮತ್ತು ಗೂಗಲ್ ಕಂಪನಿ ಒಟ್ಟಾಗಿ ಅಭಿವೃದ್ಧಿಪಡಿಸಿರುವ, ಕೈಗೆಟಕುವ ದರದ ಸ್ಮಾರ್ಟ್‌ಫೋನ್ ‘ಜಿಯೊಫೋನ್ ನೆಕ್ಸ್ಟ್’ಅನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಗುರುವಾರ ಅನಾವರಣ ಮಾಡಿದರು.
ಈ ಸ್ಮಾರ್ಟ್‌ಫೋನ್ ಸೆಪ್ಟೆಂಬರ್ 10ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದು ಜಗತ್ತಿನ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಆಗಿರಲಿದೆ ಎಂದು ಅಂಬಾನಿ ಅವರು ಕಂಪನಿಯ ವಾರ್ಷಿಕ ಮಹಾಸಭೆಯಲ್ಲಿ ಹೇಳಿದರು.
‘ಈ ಸ್ಮಾರ್ಟ್‌ಫೋನ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳು ಇರಲಿವೆ. ಧ್ವನಿ ಸಹಾಯಕ, ಭಾಷಾಂತರ ಸೌಲಭ್ಯ ಕೂಡ ಇರಲಿವೆ’ ಎಂದು ಅವರು ತಿಳಿಸಿದರು. ಗೂಗಲ್ ಕಂಪನಿಯು ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ₹ 33 ಸಾವಿರ ಕೋಟಿ ಹೂಡಿಕೆ ಮಾಡಿ, ಶೇಕಡ 7.7ರಷ್ಟು ಷೇರುಗಳನ್ನು ಖರೀದಿಸುವ ಘೋಷಣೆಯನ್ನು ಹಿಂದಿನ ವರ್ಷ ಮಾಡಿತ್ತು.
ಹೊಸ ಸ್ಮಾರ್ಟ್‌ಫೋನ್ ಬಗ್ಗೆ ಗೂಗಲ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಂದರ್ ಪಿಚೈ ಅವರು, ‘ನಮ್ಮ ತಂಡವು ಈ ಫೋನ್‌ಗಾಗಿಯೇ ಆ್ಯಂಡ್ರಾಯ್ಡ್‌ನಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ. ಅನುವಾದ ಸೌಲಭ್ಯವನ್ನೂ ಇದು ನೀಡಲಿದೆ. ಒಳ್ಳೆಯ ಕ್ಯಾಮೆರಾ, ಆ್ಯಂಡ್ರಾಯ್ಡ್‌ನ ಹೊಸ ಅಪ್ಡೇಟ್‌ಗಳು ಇದರಲ್ಲಿ ಇರಲಿವೆ. ಇದು ಭಾರತಕ್ಕಾಗಿಯೇ ತಯಾರಾದ, ಇಂಟರ್ನೆಟ್ ಸಂಪರ್ಕವನ್ನು ಮೊದಲ ಬಾರಿಗೆ ಕಾಣುತ್ತಿರುವವರಿಗೆ ಹೊಸ ಅವಕಾಶಗಳನ್ನು ತೆರೆದಿರಿಸುವಂಥದ್ದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.