ADVERTISEMENT

ಕರ್ಣಾಟಕ ಬ್ಯಾಂಕ್‌: ಉತ್ತಮ ಹಣಕಾಸು ಸಾಧನೆ

2019–20 ರ ಹಣಕಾಸು ವರ್ಷದಲ್ಲಿ ₹ 431.78 ಕೋಟಿ ನಿವ್ವಳ ಲಾಭ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 2:50 IST
Last Updated 8 ಜೂನ್ 2020, 2:50 IST
ಮಹಾಬಲೇಶ್ವರ ಎಂ.ಎಸ್.
ಮಹಾಬಲೇಶ್ವರ ಎಂ.ಎಸ್.   

ಮಂಗಳೂರು: ‘ಆರ್ಥಿಕ ಸಂಕಷ್ಟಗಳ ಸವಾಲಿನ ಸಂದರ್ಭದಲ್ಲಿಯೂ ದಕ್ಷ ಕಾರ್ಯನಿರ್ವಹಣೆಯಿಂದಾಗಿ 2019–20ರ ಹಣಕಾಸು ವರ್ಷದಲ್ಲಿ ಬ್ಯಾಂಕ್‌ ಉತ್ತಮ ಹಣಕಾಸು ಸಾಧನೆ ಮಾಡಿದೆ‘ ಎಂದು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಅವರು ತಿಳಿಸಿದ್ದಾರೆ.

‘ಕಳೆದ ವಿತ್ತೀಯ ವರ್ಷವು ಆರ್ಥಿಕ ರಂಗಕ್ಕೆ ಹಲವು ಸವಾಲುಗಳನ್ನು ಒಡ್ಡಿದ್ದರೂ, ಮಾರ್ಚ್‌ 31 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ₹ 431.78 ಕೋಟಿ ಮೊತ್ತದ ನಿವ್ವಳ ಲಾಭ ಮತ್ತು ವಿತ್ತೀಯ ವರ್ಷದ 4ನೇ ತ್ರೈಮಾಸಿಕ ಅಂತ್ಯಕ್ಕೆ ₹27.31 ಕೋಟಿಗಳ ನಿವ್ವಳ ಲಾಭ ಗಳಿಸಿರುವುದು ಉತ್ತಮ ಸಾಧನೆಯಾಗಿದೆ. ಬ್ಯಾಂಕಿನ ವಸೂಲಾಗದ ಸಾಲದ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಲಾಗಿದೆ. ಭವಿಷ್ಯದ ವೆಚ್ಚಗಳಿಗಾಗಿ ₹ 456.50 ಕೋಟಿ ತೆಗೆದು ಇರಿಸಲಾಗಿದೆ’ ಎಂದು ಹೇಳಿದ್ದಾರೆ.

‘ಮುಂಗಡಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ರಿಟೇಲ್ ಹಾಗೂ ಮಿಡ್ ಕಾರ್ಪೋರೇಟ್ ಮುಂಗಡಗಳು ಕ್ರಮವಾಗಿ ಶೇ 11.07 ಮತ್ತು ಶೇ 11.14 ದರದಲ್ಲಿ ಬೆಳವಣಿಗೆ ಕಂಡಿವೆ’ ಎಂದು ತಿಳಿಸಿದ್ದಾರೆ.

ADVERTISEMENT

ವರಮಾನ ಹೆಚ್ಚಳ: ಮಾರ್ಚ್‌ ತ್ರೈಮಾಸಿಕದಲ್ಲಿ ವರಮಾನವು ಶೇ 18ರಷ್ಟು ಹೆಚ್ಚಳವಾಗಿ ₹ 2,079.58 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿನ ವರಮಾನವು ₹ 1,821.88 ಕೋಟಿಗಳಷ್ಟಿತ್ತು.

ಬ್ಯಾಂಕಿನ ಒಟ್ಟು ವ್ಯವಹಾರವು ₹1,28,749 ಕೋಟಿಗಳಿಗೆ ತಲುಪಿದ್ದು, ವಾರ್ಷಿಕ ಶೇ 4.44 ರ ಬೆಳವಣಿಗೆ ಸಾಧಿಸಿದೆ. ಬ್ಯಾಂಕಿನ ಠೇವಣಿಗಳು ₹ 68,452 ಕೋಟಿಗಳಿಂದ ₹ 71,785.15 ಕೋಟಿಗೆ ತಲುಪಿವೆೆ. ಬ್ಯಾಂಕಿನ ನಿರ್ವಹಣಾ ಲಾಭವು ಶೇ 14.27ರಷ್ಟು ಹೆಚ್ಚಳವಾಗಿ ₹1,656.77 ಕೋಟಿ ತಲುಪಿದೆ.

ಲಾಭಾಂಶ ಇಲ್ಲ: ಆರ್‌ಬಿಐ ಮಾರ್ಗದರ್ಶಿ ಸೂತ್ರಗಳ ಅನ್ವಯ, 2019–20ನೇ ಸಾಲಿಗೆ ಬ್ಯಾಂಕ್‌ ಲಾಭಾಂಶ ಘೋಷಣೆ ಮಾಡಿಲ್ಲ. ಹಿಂದಿನ ವರ್ಷ ಪ್ರತಿ ಷೇರಿಗೆ ₹ 3.50ರಂತೆ ಲಾಭಾಂಶ ನೀಡಲಾಗಿತ್ತು.

**

ಕೋವಿಡ್ ಮಹಾಮಾರಿ ಮಧ್ಯೆಯೂ ಸಂರಕ್ಷಣೆ, ಬಲವರ್ಧನೆ, ಶಕ್ತಿಶಾಲಿಯಾಗಿ ಹೊರಹೊಮ್ಮುವ ಧ್ಯೇಯವಾಕ್ಯಗಳೊಂದಿಗೆ ಬ್ಯಾಂಕಿನ ಏಳ್ಗೆಗೆ ಕಾರ್ಯ ನಿರ್ವಹಿಸಲಿದ್ದೇವೆ
-ಮಹಾಬಲೇಶ್ವರ ಎಂ.ಎಸ್‌.,ಕರ್ಣಾಟಕ ಬ್ಯಾಂಕ್‌ ಎಂಡಿ, ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.