ADVERTISEMENT

ಕರ್ಣಾಟಕ ಬ್ಯಾಂಕ್‌ಗೆ ಲಾಭ ಶೇ 9.1ರಷ್ಟು ಏರಿಕೆ: ರಾಘವೇಂದ್ರ ಎಸ್‌. ಭಟ್

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 15:29 IST
Last Updated 8 ನವೆಂಬರ್ 2025, 15:29 IST
ರಾಘವೇಂದ್ರ ಎಸ್. ಭಟ್
ರಾಘವೇಂದ್ರ ಎಸ್. ಭಟ್   

ಬೆಂಗಳೂರು: ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹319.12 ಕೋಟಿ ಲಾಭ ಗಳಿಸಿದ್ದು, ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದ ಲಾಭಕ್ಕೆ ಹೋಲಿಸಿದರೆ ಶೇಕಡ 9.1ರಷ್ಟು ಹೆಚ್ಚಳ ಆಗಿದೆ.

ಜೂನ್‌ ತ್ರೈಮಾಸಿಕದಲ್ಲಿ ಬ್ಯಾಂಕ್‌ ₹292.40 ಕೋಟಿ ಲಾಭ ಗಳಿಸಿತ್ತು. ಬ್ಯಾಂಕ್‌ನ ಆಡಳಿತ ಮಂಡಳಿಯ ಸಭೆಯು ಮಂಗಳೂರಿನಲ್ಲಿ ಶನಿವಾರ ನಡೆಯಿತು. ಹಣಕಾಸಿನ ಫಲಿತಾಂಶಕ್ಕೆ ಮಂಡಳಿಯು ಅನುಮೋದನೆ ನೀಡಿದೆ.

2025–26ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಸೆಪ್ಟೆಂಬರ್‌ 30ಕ್ಕೆ ಕೊನೆಗೊಂಡ 6 ತಿಂಗಳ ಅವಧಿ) ಬ್ಯಾಂಕ್‌ನ ನಿವ್ವಳ ಲಾಭವು ₹611.52 ಕೋಟಿ ಆಗಿದೆ. ಹಿಂದಿನ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಬ್ಯಾಂಕ್‌ ₹736.40 ಕೋಟಿ ನಿವ್ವಳ ಲಾಭ ಕಂಡಿತ್ತು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಬ್ಯಾಂಕ್‌ನ ನಿವ್ವಳ ಬಡ್ಡಿ ವರಮಾನವು ₹728 ಕೋಟಿ ಆಗಿದೆ. ಬ್ಯಾಂಕ್‌ನ ಒಟ್ಟು ಎನ್‌ಪಿಎ ಪ್ರಮಾಣವು ಶೇ 3.33ಕ್ಕೆ ಇಳಿಕೆ ಆಗಿದೆ. ನಿವ್ವಳ ಎನ್‌ಪಿಎ ಪ್ರಮಾಣವು ಜೂನ್‌ ತ್ರೈಮಾಸಿಕದಲ್ಲಿ ಶೇ 1.44ರಷ್ಟು ಇದ್ದಿದ್ದು, ಈಗ ಶೇ 1.35ಕ್ಕೆ ತಗ್ಗಿದೆ.

‘ಕೃಷಿ ವಲಯ, ವೈಯಕ್ತಿಕ ಹಣಕಾಸಿನ ಅಗತ್ಯಗಳು, ಎಂಎಸ್‌ಎಂಇ ವಲಯದ ಮೇಲೆ ಗಮನ ನೀಡುವುದನ್ನು ಬ್ಯಾಂಕ್‌ ಮುಂದುವರಿಸಲಿದೆ’ ಎಂದು ಹಣಕಾಸಿನ ಫಲಿತಾಂಶವನ್ನು ಪ್ರಕಟಿಸುವ ಸಂದರ್ಭದಲ್ಲಿ ಬ್ಯಾಂಕ್‌ನ ಎಂ.ಡಿ. ಹಾಗೂ ಸಿಇಒ ರಾಘವೇಂದ್ರ ಎಸ್‌. ಭಟ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.