
ಬಾಗಲಕೋಟೆ: ರಾಜ್ಯದಲ್ಲಿ ಕಬ್ಬು ನುರಿಸುವ ಹಂಗಾಮು ಆರಂಭವಾಗಿ ಎರಡೂವರೆ ತಿಂಗಳಾಗಿದ್ದು, 81 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುತ್ತಿವೆ. ಕಬ್ಬು ಪೂರೈಸಿದ ರೈತರ ಕಬ್ಬಿನ ಬಿಲ್ ₹4,682 ಕೋಟಿ ಬಾಕಿ ಉಳಿದಿದೆ.
ಈವರೆಗೆ ಕಾರ್ಖಾನೆಗಳು 390 ಲಕ್ಷ ಟನ್ ಕಬ್ಬು ನುರಿಸಿದ್ದು, 31.72 ಲಕ್ಷ ಟನ್ ಸಕ್ಕರೆ ಉತ್ಪಾದನೆ ಆಗಿದೆ. ಕಾರ್ಖಾನೆಗಳು ಜ.15ರವರೆಗೆ ₹15,609 ಕೋಟಿ ಪಾವತಿಸಬೇಕಿತ್ತು. ₹10,935 ಕೋಟಿ ಮಾತ್ರ ಪಾವತಿಸಿವೆ.
ಕೆಲ ಸಕ್ಕರೆ ಕಾರ್ಖಾನೆಗಳು ಶೇ 25 ರಿಂದ ಶೇ 40ರಷ್ಟು ಮಾತ್ರ ಬಿಲ್ ಪಾವತಿಸಿದ್ದರೆ, ಕೆಲ ಕಾರ್ಖಾನೆಗಳು ಶೇ 70 ರಿಂದ ಶೇ 80ರಷ್ಟು ಪಾವತಿಸಿವೆ. ಸರಾಸರಿ ಶೇ 70ರಷ್ಟು ಬಿಲ್ ಪಾವತಿಯಾಗಿದೆ.
2025ರ ನವೆಂಬರ್ ತಿಂಗಳಲ್ಲಿಯೇ ಕಬ್ಬು ಪೂರೈಕೆಯನ್ನು ಪೂರ್ಣಗೊಳಿಸಿರುವ ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಇನ್ನೂ ₹12.58 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿವೆ.
‘ಕಾಯ್ದೆ ಪ್ರಕಾರ ಕಬ್ಬು ಪೂರೈಸಿದ 14 ದಿನಗಳಲ್ಲಿ ಬಿಲ್ ಪಾವತಿಸಬೇಕು. ಕೆಲ ಕಾರ್ಖಾನೆಗಳಲ್ಲಿ ಡಿಸೆಂಬರ್ 15ರವರೆಗೆ ಬಿಲ್ ಪಾವತಿಸಲಾಗಿದೆ. ಒಂದೂವರೆ ತಿಂಗಳ ಬಿಲ್ ಉಳಿಸಿವೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಬ್ಬು ಕಟಾವು, ಸಾಗಣೆ ಬಿಲ್ ಹೆಚ್ಚಿದ್ದು ರೈತರಿಗೆ ಹೊರೆಯಾಗುತ್ತಿದೆ. ಕೆಲ ಕಾರ್ಖಾನೆಗಳು ದೂರದಿಂದ ಕಬ್ಬು ತರುತ್ತಿವೆ. ಇದರಿಂದ ಸಾಗಣೆ ವೆಚ್ಚ ಹೆಚ್ಚಾಗುತ್ತಿದೆ. ಟನ್ ಕಬ್ಬಿಗೆ ₹850ರವರೆಗೆ ಬರಲಿದೆ’ ಎಂದರು.
ಕಬ್ಬಿನ ಬಾಕಿ ಬಿಲ್ ಅನ್ನು ಆದಷ್ಟು ಬೇಗನೆ ಪಾವತಿಸಬೇಕು. ಇಲ್ಲದಿದ್ದರೆ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಲಿದೆ.– ಬಸವಂತಪ್ಪ ಕಾಂಬಳೆ, ಜಿಲ್ಲಾ ಅಧ್ಯಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ
ಬಾಗಲಕೋಟೆ ಜಿಲ್ಲೆಯ 14 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುತ್ತಿವೆ. ಶೇ 65ರಷ್ಟು ಬಿಲ್ ಪಾವತಿ ಆಗಿದೆ. ಉಳಿದ ಬಿಲ್ ಪಾವತಿಗೆ ತಿಳಿಸಲಾಗಿದೆ.– ಶ್ರೀಶೈಲ ಕಂಕಣವಾಡಿ, ಜಂಟಿ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.