ADVERTISEMENT

ಮುಚ್ಚುವ ಭೀತಿಯಲ್ಲಿ ಸಣ್ಣ ಕೈಗಾರಿಕೆಗಳು: ಕಾಸಿಯಾ

​ಪ್ರಜಾವಾಣಿ ವಾರ್ತೆ
Published 3 ಮೇ 2021, 14:23 IST
Last Updated 3 ಮೇ 2021, 14:23 IST
ಕೆ.ಬಿ. ಅರಸಪ್ಪ
ಕೆ.ಬಿ. ಅರಸಪ್ಪ   

ಬೆಂಗಳೂರು: ‘ಕೋವಿಡ್‌ ಎರಡನೆಯ ಅಲೆ ನಿಯಂತ್ರಿಸಲು ರಾಜ್ಯದಲ್ಲಿ ಜಾರಿಗೊಳಿಸಿರುವ ಲಾಕ್‌ಡೌನ್‌ನ ದುಷ್ಪರಿಣಾಮವು ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ (ಎಸ್‌ಎಂಇ) ಮೇಲೆ ಆಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಪರಿಹಾರ ಘೋಷಿಸಬೇಕು’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಕೆ.ಬಿ. ಅರಸಪ್ಪ ಆಗ್ರಹಿಸಿದ್ದಾರೆ.

‘ಪರಿಹಾರ ಘೋಷಿಸದೆ ಇದ್ದರೆ, ಈ ವಲಯದ ಶೇಕಡ 25ರಿಂದ ಶೇ 30ರಷ್ಟು ಕೈಗಾರಿಕೆಗಳು ಸಂಪೂರ್ಣವಾಗಿ ಸ್ಥಗಿತವಾಗುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಹೇರಿದ್ದ ಲಾಕ್‌ಡೌನ್‌ನಿಂದಾಗಿ ಶೇ 20ರಷ್ಟು ಎಸ್‌ಎಂಇಗಳು ಮುಚ್ಚಿವೆ. ಇದೀಗ ಮತ್ತೆ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಇದರಿಂದ ಆಗಲಿರುವ ನಷ್ಟ ತಡೆದುಕೊಳ್ಳುವ ಸ್ಥಿತಿಯಲ್ಲಿ ಈ ಕೈಗಾರಿಕೆಗಳು ಇಲ್ಲ. ಸಾಂಕ್ರಾಮಿಕವು ಮಾರುಕಟ್ಟೆ ಮತ್ತು ಪೂರೈಕೆ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ADVERTISEMENT

‘ಸಾಂಕ್ರಾಮಿಕ ನಿಯಂತ್ರಿಸಲು ಕಠಿಣ ಕ್ರಮಗಳ ಅಗತ್ಯವಿದ್ದರೂ, ಈಗಾಗಲೇ ತೊಂದರೆಗೆ ಒಳಗಾಗಿರುವ ಸಣ್ಣ ಕೈಗಾರಿಕಾ ವಲಯದ ಮೇಲೆ ಆಗಲಿರುವ ಪರಿಣಾಮಗಳು ನಮ್ಮನ್ನು ಚಿಂತೆಗೀಡು ಮಾಡುತ್ತಿವೆ. ಹೀಗಾಗಿ, ಕಾರ್ಮಿಕರ ಜೀವನೋಪಾಯ ಮತ್ತು ಉತ್ಪಾದಕ ಕ್ಷೇತ್ರಗಳ ಮೇಲೆ ಬೀರಲಿರುವ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಕಾಸಿಯಾ ಬೇಡಿಕೆಗಳು

1. ವಿದ್ಯತ್ ಶುಲ್ಕ ಪರಿಷ್ಕರಣೆ ಒಂದು ವರ್ಷದವರೆಗೆ ಮುಂದೂಡಿಕೆ

2. ಮಾಸಿಕ ವಿದ್ಯುತ್ ಶುಲ್ಕ ಆರು ತಿಂಗಳು ಮನ್ನಾ

3. ಎಸ್ಎಂಇಗಳಿಗೆ ಶೇಕಡ 4ರ ಬಡ್ಡಿ ದರದಲ್ಲಿ ದುಡಿಯುವ ಬಂಡವಾಳ

4. ಎಸ್ಎಂಇಗಳಿಗೆ ಸಂಬಂಧಿಸಿದ ತಪಾಸಣೆಗಳನ್ನು ಆರು ತಿಂಗಳು ಮುಂದೂಡುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.