ADVERTISEMENT

ಉಂಡುಟ್ಟು ಸುಖವಾಗಿರಿ ಎನ್ನುವ ಖಾದಿ ಮೇಳ

ಹೇಮಾ ವೆಂಕಟ್
Published 11 ಜನವರಿ 2019, 19:45 IST
Last Updated 11 ಜನವರಿ 2019, 19:45 IST
ಚೀಮಥಾಮಣಿಯ ಫಾರೂಕ್‌ ಷರೀಫ್‌ ಅವರ ರೇಷ್ಮೆ ಸೀರೆ ಮಳಿಗೆ
ಚೀಮಥಾಮಣಿಯ ಫಾರೂಕ್‌ ಷರೀಫ್‌ ಅವರ ರೇಷ್ಮೆ ಸೀರೆ ಮಳಿಗೆ   

ನೇಕಾರರಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ‍ಪ್ರತಿ ವರ್ಷ ಜನವರಿ ಇಡೀ ತಿಂಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಖಾದಿ ಉತ್ಸವ ಆಯೋಜಿಸುತ್ತಿದೆ. ಈ ವರ್ಷದ ಉತ್ಸವ ಆರಂಭಗೊಂಡಿದೆ.

ಹಾಗಂತ ಇದು ಖಾದಿ ಬಟ್ಟೆಗಳ ಮಾರಾಟ ಮೇಳವಷ್ಟೇ ಅಲ್ಲ. ಖಾದಿ ಬಟ್ಟೆಗಳ ಜೊತೆಗೆ ರಾಜ್ಯದ ವಿವಿಧೆಡೆಯ ರೇಷ್ಮೆ ಸೀರೆಗಳ ಹತ್ತಾರು ಮಳಿಗೆಗಳು ಇವೆ. ಕೈಮಗ್ಗದಿಂದ ನೇಯ್ದ ಖಾದಿ ಸೀರೆಗಳು, ಖಾದಿ ಜುಬ್ಬಾ, ಪೈಜಾಮ, ರೇಷ್ಮೆ ಸೀರೆಗಳು, ಲಂಗ-ದಾವಣಿ, ಜಮಖಾನಾ, ಮ್ಯಾಟ್, ಕಂಬಳಿ ಹೀಗೆ ಎಲ್ಲವೂ ಲಭ್ಯವಿದೆ.ರಾಜ್ಯದ ಖಾದಿ ವಸ್ತ್ರ ತಯಾರಕರಷ್ಟೇ ಅಲ್ಲದೆ 11 ರಾಜ್ಯಗಳಿಂದ ಖಾದಿ ವಸ್ತ್ರ ತಯಾರಕರು ಭಾಗವಹಿಸಿದ್ದಾರೆ. ಒಟ್ಟು 200 ಮಳಿಗೆಗಳಿವೆ.

ಮೇಳದ ಪ್ರವೇಶ ದ್ವಾರದಲ್ಲಿ ಎಂದಿನಂತೆ ಟೆರಾಕೋಟಾ ಮತ್ತು ಕೈಮಗ್ಗದ ಪ್ರಾತ್ಯಕ್ಷಿಕೆಯ ಸ್ವಾಗತವಿದೆ. ಒಳಗೆ ಕಾಲಿಡುತ್ತಿದ್ದಂತೆ ಖಾದಿ ಉಡುಪು ಮತ್ತು ರೇಷ್ಮೆ ಸೀರೆಗಳ ಹತ್ತಾರು ಮಳಿಗಳು ಸಿಗುತ್ತವೆ. ನಂತರ ಶುರುವಾಗುವುದೇ ಉತ್ತರ ಕರ್ನಾಟಕದ ರುಚಿ. ಕುರುಕಲು ತಿಂಡಿಗಳಾದ ಬೆಣ್ಣೆ ಮುರುಕು, ನಿಪ್ಪಟ್ಟು, ಕೋಡುಬಳೆ, ಹಪ್ಪಳ, ಸಂಡಿಗೆ, ಕರಿದ ಮಸಾಲೆ ಬೇಳೆ, ಶೇಂಗಾ, ಹಲಸಿನ ಚಿಪ್ಸ್‌, ಬಾಳೆಕಾಯಿ ಚಿಪ್ಸ್‌, ಜೋಳದ ರೊಟ್ಟಿ, ಚಟ್ನಿ ಪುಡಿಗಳು, ಪುಳಿಯೊಗರೆ ಮಿಕ್ಸ್‌, ಶೇಂಗಾ ಹೋಳಿಗೆ, ಮಲೆನಾಡಿನ ಬಗೆ ಬಗೆಯ ಉಪ್ಪಿನಕಾಯಿ, ಸಂಡಿಗೆ ಹೀಗೆ ಹತ್ತಾರುಮಳಿಗೆಗಳು ಸ್ವಾಗತಿಸುತ್ತಿವೆ. ಈ ಮಳಿಗೆಗಳ ವಿಶೇಷವೆಂದರೆ ಪ್ರತಿಯೊಬ್ಬರಿಗೂ ರುಚಿ ನೋಡುವ ಅವಕಾಶವಿದೆ. ರುಚಿ ಸವಿದ ಮೇಲೆ ದಾಕ್ಷಿಣ್ಯಕ್ಕಾದರೂ ಖರೀದಿ ಮಾಡುತ್ತಾರೆ ಎಂಬ ನಂಬಿಕೆ ಅವರದು.

ADVERTISEMENT

ಚರ್ಮದ ಪಾದರಕ್ಷೆ, ಶೂ, ಬ್ಯಾಗುಗಳು, ಸೆಣಬಿನ ಚೀಲಗಳು, ಮಣ್ಣಿನ ಆಲಂಕಾರಿಕ ವಸ್ತುಗಳು, ಆಭರಣ ಮಳಿಗೆಗಳೂ ಇವೆ. ದೊಡ್ಡ ದೊಡ್ಡ ನೆಲ ಹಾಸು(ಕಾರ್ಪೆಟ್)ಗಳ ಮಳಿಗೆಗಳಿವೆ. ನಿರ್ಗಮನ ದ್ವಾರದ ಬಳಿ ಚಿತ್ರ ಕಲಾಕೃತಿಗಳ ಮಳಿಗೆಯೊಂದಿದೆ.

ಖಾದಿ ಮಳಿಗೆಗಳಲ್ಲಿ ಶರ್ಟು, ಜಾಕೆಟ್, ಟವಲ್ ಪಂಚೆ ಮುಂತಾದ ಸಾಂಪ್ರದಾಯಿಕ ಉಡುಪುಗಳನ್ನು ನಗರದ ಮಂದಿ ಖರೀದಿಸುತ್ತಿದ್ದಾರೆ. ಇನ್ನು ಬೆಡ್‌ಶೀಟ್‌ಗಳ ಮಳಿಗೆ, ರಜಾಯಿ, ಮಕ್ಕಳ ಉಡುಪುಗಳು, ಹೆಣ್ಣುಮಕ್ಕಳ ಟಾಪ್‌ಗಳು, ಕಲಂಕರಿ ಬಟ್ಟೆಗಳು, ಕಾಟನ್ ಸೀರೆಗಳ ಮಳಿಗೆಗಳು ಹೆಚ್ಚು ಜನಸಂದಣಿಯಿಂದ ಕೂಡಿವೆ.

ರಾಜ್ಯದ ರೇಷ್ಮೆ ಸೀರೆಗಳ ಹತ್ತಾರು ಮಳಿಗೆಗಳಿವೆ. ಶುದ್ಧ ರೇಷ್ಮೆ ಸೀರೆಗಳ ಬೆಲೆ ₹3 ಸಾವಿರದಿಂದ ಆರಂಭಿಸಿ 20 ಸಾವಿರದವರೆಗಿನ ಸೀರೆಗಳೂ ಇವೆ. ಸೀರೆಗಳ ಜಗತ್ತಿನ ಇತ್ತೀಚಿನ ಟ್ರೆಂಡ್‌ ಲಿನಿನ್‌ ಕಾಟನ್‌ ಸೀರೆಗಳು. ಶುದ್ಧ ಹತ್ತಿಯ ಬೆಳ್ಳಿಯ ಅಂಚಿರುವ ಸರಳ ವಿನ್ಯಾಸದ ಲಿನಿನ್ ಸೀರೆಗಳು ಬಹುತೇಕ ಎಲ್ಲ ಮಳಿಗೆಗಳಲ್ಲೂ ಇವೆ.

ಪ್ರತಿ ಮೇಳದಲ್ಲಿಯೂ ಕಾಶ್ಮೀರಿ ರೇಷ್ಮೆ ಉಡುಪು, ಸೀರೆಗಳ ಮಳಿಗೆ ಇದ್ದೇ ಇರುತ್ತದೆ. ಈ ಬಾರಿ ಹನ್ನೆರಡು ಕಾಶ್ಮೀರಿ ಮಳಿಗೆಗಳು ಇವೆ. ಕಾಶ್ಮೀರಿ ಮಹಿಳೆಯರ ಸಾಂಪ್ರದಾಯಿಕ ಉಡುಗೆ ಶುದ್ಧ ಕಾಶ್ಮೀರಿ ರೇಷ್ಮೆಯ ಎಂಬ್ರಾಯಿಡರಿ ಕುಸುರಿ ಇರುವ ಚೂಡೀದಾರ್, ದುಪಟ್ಟಾ, ಶಾಲ್‌, ಸೀರೆಗಳು ಆಕರ್ಷಕವಾಗಿವೆ.ತಮಿಳುನಾಡು, ಆಂಧ್ರಪ್ರದೇಶ, ಗುಜರಾಜ್‌, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹೀಗೆ ಹಲವು ರಾಜ್ಯಗಳ ಸೀರೆ, ಉಡುಪುಗಳು ಒಂದೇ ಸೂರಿನಡಿ ಸಿಗುತ್ತಿರುವುದು ಮೇಳದ ವಿಶೇಷ. ಖಾದಿ ಉತ್ಸವ ಜನವರಿ 31ರವರೆಗೆ ನಡೆಯಲಿದೆ.

ವ್ಯವಸ್ಥೆ ಅಚ್ಚುಕಟ್ಟಾಗಿದೆ

ಮೇಳದಲ್ಲಿ ಮೊದಲೆರಡು ಮಳಿಗೆ ನಮ್ಮದು. 20 ವರ್ಷಗಳಿಂದ ನಗರದಲ್ಲಿ ನಡೆಯುವ ಮೇಳಗಳಿಗೆ ಬರುತ್ತಿದ್ದೇವೆ. ಆರು ವರ್ಷಗಳಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುವ ಮೇಳಕ್ಕೆ ಬರುತ್ತಿದ್ದೇವೆ. ಪ್ರತಿ ವರ್ಷವೂ ಕನಿಷ್ಠ ₹20 ಲಕ್ಷದ ವಹಿವಾಟು ನಡೆಯುತ್ತದೆ. ಈ ವರ್ಷ ಪ್ರತಿಕ್ರಿಯೆ ಚೆನ್ನಾಗಿದೆ. ವ್ಯವಸ್ಥೆಯೂ ಅಚ್ಚುಕಟ್ಟಾಗಿದೆ.

–ಮೊಹಮದ್‌ ಗೌಸ್‌, ಕುಂದಗೋಳ

ಇಲ್ಲೂ ಸ್ಥಿರಗ್ರಾಹಕರಿದ್ದಾರೆ

ರೇಷ್ಮೆ ಸೀರೆಗಳ ಮೂರು ಮಳಿಗೆ ಹಾಕಿದ್ದೇವೆ. ನಮ್ಮಲ್ಲಿ ಈ ವರ್ಷ ಬಾರ್ಡ್‌ ಲೆಸ್‌ ಸೀರೆಗಳು ಹೆಚ್ಚು ಮಾರಾಟವಾಗುತ್ತಿವೆ. ₹3 ಸಾವಿರದಿಂದ ₹15 ಸಾವಿರದವರೆಗಿನ ಸೀರೆಗಳು ಇವೆ. ಮೇಳಕ್ಕೆ ಬರುವವರಲ್ಲಿಯೂ ನಮ್ಮ ಸ್ಥಿರ ಗ್ರಾಹಕರಿದ್ದಾರೆ. ಕನಿಷ್ಠ ₹50 ಲಕ್ಷ ವಹಿವಾಟು ನಡೆಯುವ ನಿರೀಕ್ಷೆ ಇದೆ.

–ಫಾರೂಕ್‌ ಷರೀಫ್‌, ಚಿಂತಾಮಣಿ

ವ್ಯಾಪಾರ ಚೆನ್ನಾಗಿದೆ

ಹಿಂದೆ ಅರಮನೆ ಮೈದಾನ, ಚಾಮರಾಜಪೇಟೆ, ಮಲ್ಲೇಶ್ವರಂ ಮೈದಾನಗಳಲ್ಲಿ ನಡೆಯುತ್ತಿದ್ದ ಉತ್ಸವಗಳಿಗೂ ಬರುತ್ತಿದ್ದೆವು. ಪಶ್ಚಿಮ ಬಂಗಾಳದ ಕಾಟನ್ ಸೀರೆಗಳು, ಪ್ಯೂರ್‌ ಸಿಲ್ಕ್‌, ಕೋಸಾ ಸಿಲ್ಕ್‌, ಕಾಂತಾ ವರ್ಕ್ಸ್‌, ಟಸ್ಸಾರ್ ಸಿಲ್ಕ್‌, ಲಿನಿನ್‌ ಕಾಟನ್‌ ಸೀರೆಗಳು ನಮ್ಮಲ್ಲಿವೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ.

–ಪರೇಶ್‌ ಪಾಲ್‌, ಪಶ್ಚಿಮ ಬಂಗಾಳ

ಉಪ್ಪಿನಕಾಯಿ ನಮ್ಮ ವಿಶೇಷ

ನಮ್ಮಲ್ಲಿ ಹೆರಳೆಕಾಯಿ, ನಿಂಬೆ, ಹುಣಸೆ, ಮಿಡಿಮಾವು, ಬೆಳ್ಳುಳ್ಳಿ, ಶುಂಠಿ, ಕಳಲೆ, ಅಮಟೆಕಾಯಿ ಸೇರಿದಂತೆ 23 ಬಗೆಯ ಮಲ್ನಾಡ್ ಉಪ್ಪಿನ ಕಾಯಿ ಇದೆ. 8 ಬಗೆಯ ಸಂಡಿಗೆ, ಹಪ್ಪಳ, ಚಟ್ನಿಪುಡಿ, ನಮ್ಮೂರು ಶಿವಮೊಗ್ಗ. ಆದರೆ ಬೆಂಗಳೂರಿನಲ್ಲಿಯೇ ನಮ್ಮ ಉತ್ಪಾದನಾ ಘಟನೆ ಇದೆ. ಇಲ್ಲಿ ಎರಡು ಮಳಿಗೆಗಳಿವೆ. ಕಳೆದ ವರ್ಷ ₹ 6 ಲಕ್ಷ ವಹಿವಾಟು ಆಗಿತ್ತು. ಈ ವರ್ಷ ಹೆಚ್ಚು ವ್ಯಾಪಾರವಾಗುವ ನಿರೀಕ್ಷೆ ಇದೆ. ಮೇಳದಲ್ಲೂ ಸ್ಥಿರ ಗ್ರಾಹಕರಿದ್ದಾರೆ.

–ಸುಮಾ, ದೇವಿ ಫುಡ್ಸ್‌, ಉತ್ತರಹಳ್ಳಿ

ಕರದಂಟು ಮಳಿಗೆ ಹುಡುಕಿ ಬರುತ್ತಾರೆ

ಬಾಗಲಕೋಟೆಯ ಅಮೀನಗಡದಲ್ಲಿ ಪೂಜಾ ಸ್ವೀಟ್ಸ್‌ ಮಳಿಗೆ ಇದೆ. ಕರದಂಟು ನಮ್ಮ ವಿಶೇಷ. 15 ವರ್ಷದಿಂದ ಮೇಳಗಳಿಗೆ ಬರುತ್ತಿದ್ದೇವೆ. ಪ್ರತಿ ವರ್ಷ ಆರರಿಂದ ಏಳು ಲಕ್ಷ ವಹಿವಾಟು ನಡೆಯುತ್ತದೆ. ಮೇಳದಲ್ಲಿ ಕೊನೆಯ ಸಾಲಿನಲ್ಲಿ ಮಳಿಗೆ ಇದ್ದರೂ ಗ್ರಾಹಕರು ಕರದಂಟು ಮಳಿಗೆ ಹುಡುಕಿಕೊಂಡು ಬರುತ್ತಾರೆ.

–ಅನ್ನಪೂರ್ಣ, ಅಮೀನಗಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.