
ಮುಂಬೈ: ಹೊಸದಾಗಿ ಜಾರಿಗೆ ಬಂದಿರುವ ಕಾರ್ಮಿಕ ಸಂಹಿತೆಗಳು ದೇಶದ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ₹75 ಸಾವಿರ ಕೋಟಿಯಷ್ಟು ಹೆಚ್ಚು ಮಾಡಲಿವೆ ಎಂದು ಎಸ್‌ಬಿಐ ರಿಸರ್ಚ್‌ನ ಸಂಶೋಧನಾ ವರದಿಯೊಂದು ಅಂದಾಜು ಮಾಡಿದೆ.
ಅಲ್ಲದೆ, ಈ ಸಂಹಿತೆಗಳು ಸಂಘಟಿತ ವಲಯದ ಕಾರ್ಮಿಕರ ಪ್ರಮಾಣವನ್ನು ಕನಿಷ್ಠ ಶೇ 15ರಷ್ಟು ಹೆಚ್ಚು ಮಾಡಲಿವೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ.
ಕಾರ್ಮಿಕ ಸಂಹಿತೆಗಳನ್ನು ನವೆಂಬರ್ 21ರಿಂದ ಜಾರಿಗೆ ತರಲಾಗಿದೆ. ಇವು ಮಧ್ಯಮ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣವನ್ನು ಶೇ 1.3ರಷ್ಟು ಕಡಿಮೆ ಮಾಡುವ ಅಂದಾಜು ಇದೆ ಎಂದು ಎಸ್‌ಬಿಐನ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
ನಾಲ್ಕು ಸಂಹಿತೆಗಳು ಕಾರ್ಮಿಕರನ್ನೂ ಉದ್ಯೋಗದಾತರನ್ನೂ ಬಲಪಡಿಸುವ ಕೆಲಸ ಮಾಡಲಿವೆ. ರಕ್ಷಣೆ ಇರುವ, ಉತ್ಪಾದಕತೆಯನ್ನು ತೋರಿಸುವ, ಕೆಲಸದ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿರುವ ಕಾರ್ಮಿಕ ಶಕ್ತಿಯನ್ನು ಈ ಸಂಹಿತೆಗಳು ರೂಪಿಸಲಿವೆ ಎಂದು ವರದಿ ಹೇಳಿದೆ.
ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ಸಂಹಿತೆಗಳು ಹೆಚ್ಚು ಮಾಡುತ್ತವೆ ಎಂಬ ಬಗ್ಗೆ ವರದಿಯಲ್ಲಿ ವಿವರಿಸಲಾಗಿದೆ. ದೇಶದ ಅಸಂಘಟಿತ ವಲಯದಲ್ಲಿ ಈಗ ಅಂದಾಜು 44 ಕೋಟಿ ಮಂದಿ ಇದ್ದಾರೆ. ಈ ಪೈಕಿ ಅಂದಾಜು 31 ಕೋಟಿ ಮಂದಿ ಇ–ಶ್ರಮ್ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಶೇ 20ರಷ್ಟು ಮಂದಿ ಅಸಂಘಟಿತ ವಲಯದಿಂದ ಸಂಘಟಿತ ವಲಯಕ್ಕೆ ಬರುತ್ತಾರೆ ಎಂದು ಅಂದಾಜಿಸುವುದಾದರೆ, ಈ ಸಂಹಿತೆಗಳಿಂದಾಗಿ 10 ಕೋಟಿ ಮಂದಿಗೆ ಅನುಕೂಲ ಆಗಲಿದೆ. ಇದರಿಂದಾಗಿ ಸಾಮಾಜಿಕ ಭದ್ರತಾ ವ್ಯವಸ್ಥೆಯ ವ್ಯಾಪ್ತಿಯು ಮುಂದಿನ ಎರಡರಿಂದ ಮೂರು ವರ್ಷಗಳ ಅವಧಿಯಲ್ಲಿ ಶೇ 80ರಿಂದ ಶೇ 85ರವರೆಗೆ ಹೆಚ್ಚಲಿದೆ ಎಂದು ಅಂದಾಜು ಮಾಡಲಾಗಿದೆ.
ಕಾರ್ಮಿಕ ಸಂಹಿತೆಗಳ ಅನುಷ್ಠಾನ, ಕಂಪನಿಗಳ ಮಟ್ಟದಲ್ಲಿ ಆಗುವ ವೆಚ್ಚ ಹಾಗೂ ರಾಜ್ಯಗಳು ಈ ಸಂಹಿತೆಗೆ ಪೂರಕವಾಗಿ ತರುವ ನಿಯಮಗಳನ್ನು ಆಧರಿಸಿ ನಿರುದ್ಯೋಗದ ಪ್ರಮಾಣವು ಕಡಿಮೆ ಆಗಲಿದೆ ಎಂದು ಅದು ಹೇಳಿದೆ.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.