ADVERTISEMENT

ಶೀಘ್ರವೇ ಕಾರ್ಮಿಕ ಸಂಹಿತೆಗಳ ಅನುಷ್ಠಾನ?

ಪಿಟಿಐ
Published 6 ಜೂನ್ 2021, 19:30 IST
Last Updated 6 ಜೂನ್ 2021, 19:30 IST
ಸಾಂದರ್ಭಿಕ ಚಿತ್ರ (ಕೃಪೆ; ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ; ಐಸ್ಟಾಕ್)   

ನವದೆಹಲಿ: ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಮುಂದಡಿ ಇರಿಸಲಿದ್ದು, ಇವು ಇನ್ನು ಎರಡು ತಿಂಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಸಂಹಿತೆಗಳು ಜಾರಿಗೆ ಬಂದರೆ, ನೌಕರರ ಕೈಗೆ ಸಿಗುವ ಸಂಬಳದ ಮೊತ್ತ ಕಡಿಮೆ ಆಗಲಿದ್ದು, ಭವಿಷ್ಯನಿಧಿ ಖಾತೆಗೆ (ಪಿ.ಎಫ್‌.) ಜಮಾ ಆಗುವ ಮೊತ್ತ ಹೆಚ್ಚಳವಾಗಲಿದೆ.

ಕಾರ್ಮಿಕ ಸಂಹಿತೆಗಳ ಭಾಗವಾಗಿರುವ ವೇತನ ಸಂಹಿತೆ ಜಾರಿಗೆ ಬಂದ ನಂತರ ಮೂಲ ವೇತನ ಹಾಗೂ ನೌಕರರಿಂದ ಕಡಿತವಾಗುವ ಪಿ.ಎಫ್. ಮೊತ್ತವನ್ನು ಲೆಕ್ಕ ಹಾಕುವ ವಿಧಾನದಲ್ಲಿ ಬದಲಾವಣೆ ಆಗಲಿದೆ. ಸಂಹಿತೆಗಳನ್ನು ಏಪ್ರಿಲ್ 1ರಿಂದಲೇ ಜಾರಿಗೆ ತರಲು ಕೇಂದ್ರ ಕಾರ್ಮಿಕ ಸಚಿವಾಲಯವು ಬಯಸಿತ್ತು.

ಸಂಹಿತೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಸಚಿವಾಲಯ ಅಂತಿಮಗೊಳಿಸಿತ್ತು. ಆದರೆ, ಹಲವು ರಾಜ್ಯಗಳು ಈ ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಸಂಹಿತೆಗಳ ಅನುಷ್ಠಾನ ಆಗಿರಲಿಲ್ಲ. ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಕರಡು ನಿಯಮಗಳನ್ನು ಈಗಾಗಲೇ ಸಿದ್ಧಪಡಿಸಿವೆ ಎಂದು ಮೂಲಗಳು ತಿಳಿಸಿವೆ.

ವೇತನ ಸಂಹಿತೆಯು ಎಲ್ಲ ಬಗೆಯ ಭತ್ಯೆಗಳು ನೌಕರರ ಒಟ್ಟು ವೇತನದ ಶೇಕಡ 50ರಷ್ಟನ್ನು ಮೀರುವಂತಿಲ್ಲ ಎಂದು ಹೇಳುತ್ತದೆ. ಅಂದರೆ, ಒಟ್ಟು ಸಂಬಳದಲ್ಲಿ ಶೇಕಡ 50ರಷ್ಟು ಭಾಗವು ಮೂಲವೇತನ ಆಗಿರಬೇಕು. ಪಿ.ಎಫ್‌. ಖಾತೆಗೆ ವರ್ಗಾವಣೆ ಆಗುವ ಮೊತ್ತವನ್ನು ನೌಕರನ ಮೂಲವೇತನದ (ಮೂಲ ವೇತನ ಮತ್ತು ಡಿ.ಎ. ಒಟ್ಟು ಮೊತ್ತ) ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ.

ಸಂಹಿತೆಯು ಜಾರಿಗೆ ಬಂದ ನಂತರ ನೌಕರರಿಗೆ ಕೈಗೆ ಸಿಗುವ ಸಂಬಳದ ಮೊತ್ತ ಕಡಿಮೆ ಆಗುತ್ತದೆ. ಉದ್ಯೋಗದಾತರು ಪಿ.ಎಫ್‌.ಗೆ ಜಮಾ ಮಾಡಬೇಕಿರುವ ಮೊತ್ತ ಹೆಚ್ಚಳವಾಗುತ್ತದೆ. 300ಕ್ಕಿಂತ ಕಡಿಮೆ ನೌಕರರನ್ನು ಹೊಂದಿರುವ ಕಂಪನಿಗಳು ಸರ್ಕಾರದ ಅನುಮತಿ ಇಲ್ಲದೆಯೂ ನೌಕರರನ್ನು ಕೆಲಸದಿಂದ ತೆಗೆಯಬಹುದು ಎಂದು ಕೈಗಾರಿಕಾ ಸಂಬಂಧಗಳ ಕುರಿತ ಸಂಹಿತೆಯು ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.