ADVERTISEMENT

ಮೈಂಡ್‌ಟ್ರೀ ಸ್ವತಂತ್ರ ಕಾರ್ಯನಿರ್ವಹಣೆ

ಎಲ್‌ಆ್ಯಂಡ್‌ಟಿ ಸಿಇಒ ಸುಬ್ರಮಣಿಯನ್‌ ಹೇಳಿಕೆ

ಪಿಟಿಐ
Published 19 ಮಾರ್ಚ್ 2019, 17:46 IST
Last Updated 19 ಮಾರ್ಚ್ 2019, 17:46 IST
   

ಮುಂಬೈ: ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಾಫ್ಟ್‌ವೇರ್‌ ಸಂಸ್ಥೆ ಮೈಂಡ್‌ಟ್ರೀ ಅನ್ನು ತಕ್ಷಣಕ್ಕೆ ತನ್ನ ಐ.ಟಿ ಅಂಗಸಂಸ್ಥೆಯಲ್ಲಿ ವಿಲೀನಗೊಳಿಸುವುದಿಲ್ಲ ಎಂದು ಎಂಜಿನಿಯರಿಂಗ್‌ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿರುವ ಲಾರ್ಸನ್‌ ಆ್ಯಂಡ್‌ ಟುಬ್ರೊ (ಎಲ್‌ಆ್ಯಂಡ್‌ಟಿ) ತಿಳಿಸಿದೆ.

‘ಎಲ್‌ಆ್ಯಂಡ್‌ಟಿ ಇನ್ಫೊಟೆಕ್‌ನಲ್ಲಿ ಮೈಂಡ್‌ಟ್ರೀ ವಿಲೀನಗೊಳಿಸುವುದು ನಮ್ಮ ತಕ್ಷಣದ ಆಲೋಚನೆಯಾಗಿಲ್ಲ. ಸದ್ಯಕ್ಕೆ ಮೈಂಡ್‌ಟ್ರೀ ಸ್ವತಂತ್ರ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸಲಿದೆ’ ಎಂದು ಎಲ್‌ಆ್ಯಂಡ್‌ಟಿ ವ್ಯವಸ್ಥಾಪಕ ನಿರ್ದೇಶಕ ಎಸ್‌. ಎನ್‌. ಸುಬ್ರಮಣಿಯನ್‌ ಅವರು ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಮೈಂಡ್‌ಟ್ರೀನಲ್ಲಿನ ಹಿರಿಯ ಅಧಿಕಾರಿಗಳು ನಮ್ಮ ಉತ್ತಮ ಸ್ನೇಹಿತರಾಗಿದ್ದಾರೆ. ಈ ಸ್ವಾಧೀನ ಪ್ರಕ್ರಿಯೆಯಿಂದ ಒಳ್ಳೆಯದೇ ಆಗಲಿದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಮೈಂಡ್‌ಟ್ರೀಯನ್ನು ಮೂರು ಹಂತಗಳಲ್ಲಿ ಸ್ವಾಧೀನಪಡಿಸಿಕೊಳ್ಳಲು ಹೊರಟಿರುವ ಎಲ್‌ಆ್ಯಂಡ್‌ಟಿ, ವಿ. ಜಿ. ಸಿದ್ಧಾರ್ಥ ಅವರ ಒಡೆತನದಲ್ಲಿದ್ದ ಶೇ 20.3ರಷ್ಟು ಷೇರುಗಳನ್ನು ಪ್ರತಿ ಷೇರಿಗೆ ₹ 980ರಂತೆ, ಸಾರ್ವಜನಿಕರ ಶೇ 15ರಷ್ಟು ಷೇರುಗಳನ್ನು ಮತ್ತು ಮುಕ್ತ ಕೊಡುಗೆ ಮೂಲಕ ಖರೀದಿಸಲು ಮುಂದಾಗಿದೆ. ಈ ಮೂಲಕ ₹ 10,733 ಕೋಟಿ ಪಾವತಿಸಿ ಶೇ 67ರಷ್ಟು ಪಾಲು ಬಂಡವಾಳವನ್ನು ತನ್ನದಾಗಿಸಿಕೊಳ್ಳಲು ಹೊರಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.