ನವದೆಹಲಿ: ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿಯು ಪಡೆದಿರುವ ಸಾಲವನ್ನು ‘ವಂಚನೆ’ ಎಂದು ವರ್ಗೀಕರಿಸಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ತೀರ್ಮಾನಿಸಿದೆ. ಅಲ್ಲದೆ, ಕಂಪನಿಯ ನಿರ್ದೇಶಕರಾಗಿದ್ದ ಅನಿಲ್ ಅಂಬಾನಿ ಅವರ ಹೆಸರನ್ನು ಆರ್‌ಬಿಐಗೆ ಕಳುಹಿಸಲು ಕೂಡ ಬ್ಯಾಂಕ್ ನಿರ್ಧರಿಸಿದೆ.
ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ಕಂಪನಿಗೆ ಸಾಲ ನೀಡಿರುವ ಇತರ ಬ್ಯಾಂಕ್‌ಗಳೂ ಇದೇ ಹಾದಿ ತುಳಿಯುವ ಸಾಧ್ಯತೆ ಇದೆ.
ಸಾಲದ ಖಾತೆಯನ್ನು ‘ವಂಚನೆ’ ಎಂದು ವರ್ಗೀಕರಿಸುವುದಾಗಿ ಎಸ್‌ಬಿಐ ಮಾಹಿತಿ ನೀಡಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ. ಆರ್‌ಬಿಐ ಮಾರ್ಗಸೂಚಿ ಪ್ರಕಾರ, ಖಾತೆಯೊಂದನ್ನು ‘ವಂಚನೆ’ ಎಂದು ವರ್ಗೀಕರಿಸಿದ ನಂತರ ಬ್ಯಾಂಕ್ ಅದನ್ನು ಆರ್‌ಬಿಐಗೆ 21 ದಿನಗಳಲ್ಲಿ ವರದಿ ಮಾಡಬೇಕು. ಅಲ್ಲದೆ, ಪ್ರಕರಣವನ್ನು ಸಿಬಿಐ ಅಥವಾ ಪೊಲೀಸರಿಗೆ ವರದಿ ಮಾಡಬೇಕು.
ಷೇರುಪೇಟೆಗೆ ನೀಡಿರುವ ಮಾಹಿತಿ ಪ್ರಕಾರ ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅದರ ಅಧೀನ ಸಂಸ್ಥೆಗಳು ಬ್ಯಾಂಕುಗಳಿಂದ ಒಟ್ಟು ₹31,580 ಕೋಟಿ ಸಾಲ ಪಡೆದಿವೆ.
ಸಾಲದ ಮೊತ್ತವನ್ನು ಭಿನ್ನ ಉದ್ದೇಶಗಳಿಗೆ ಬಳಕೆ ಮಾಡಿರುವುದು ಕಂಡುಬಂದಿದೆ, ಸಮೂಹದ ಬೇರೆ ಬೇರೆ ಸಂಸ್ಥೆಗಳಲ್ಲಿ ಹಣದ ಹರಿವು ಕಂಡುಬಂದಿದೆ ಎಂದು ಕಂಪನಿಗೆ ಕಳುಹಿಸಿರುವ ಪತ್ರದಲ್ಲಿ ಎಸ್‌ಬಿಐ ಹೇಳಿದೆ.
ಸಾಲವನ್ನು ಹಿಂದಿರುಗಿಸದೆ ಇರುವವರು ಹಾಗೂ ವಂಚನೆ ಎಸಗಿರುವವರು ಬ್ಯಾಂಕ್‌ಗಳಿಂದ, ಸರ್ಕಾರಿ ಸ್ವಾಮ್ಯದ ಬ್ಯಾಂಕೇತರ ಹಣಕಾಸು ಕಂಪನಿಗಳಿಂದ (ಎನ್‌ಬಿಎಫ್‌ಸಿ), ಅಭಿವೃದ್ಧಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದನ್ನು ಐದು ವರ್ಷಗಳವರೆಗೆ ನಿಷೇಧಿಸಲಾಗುತ್ತದೆ. ವಂಚನೆ ಎಸಗಿದ ಮೊತ್ತವನ್ನು ಪೂರ್ತಿಯಾಗಿ ಪಾವತಿಸಿ ಮಾಡಿದ ನಂತರ ಐದು ವರ್ಷಗಳವರೆಗೆ ಇದು ಜಾರಿಯಲ್ಲಿ ಇರುತ್ತದೆ.
ಈ ಅವಧಿ ಪೂರ್ಣಗೊಂಡ ನಂತರ, ವ್ಯಕ್ತಿಗೆ ಸಾಲ ನೀಡಬೇಕೇ ಬೇಡವೇ ಎಂಬ ಬಗ್ಗೆ ಹಣಕಾಸು ಸಂಸ್ಥೆಗಳು ತೀರ್ಮಾನ ತೆಗೆದುಕೊಳ್ಳಬಹುದು.
ವಂಚನೆ ಗುರುತಿಸುವ ಸಮಿತಿಯ ವರದಿ ಪ್ರಕಾರ ಒಟ್ಟು ಸಾಲದ ಮೊತ್ತದಲ್ಲಿ ₹13,667 ಕೋಟಿಯನ್ನು (ಶೇ 44ರಷ್ಟನ್ನು) ಸಾಲ ಮರುಪಾವತಿಗೆ ಹಾಗೂ ಇತರ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ₹12,692 ಕೋಟಿಯನ್ನು (ಶೇ 41ರಷ್ಟು) ಸಂಬಂಧಿತ ಸಂಸ್ಥೆ/ವ್ಯಕ್ತಿಗಳಿಗೆ ಪಾವತಿ ಮಾಡಲು ಬಳಸಲಾಗಿದೆ.
₹6,265 ಕೋಟಿಯನ್ನು ಇತರ ಬ್ಯಾಂಕ್‌ಗಳ ಸಾಲ ತೀರಿಸಲು ಬಳಸಲಾಗಿದೆ. ₹5,501 ಕೋಟಿಯನ್ನು ಸಂಬಂಧಪಟ್ಟ ವ್ಯಕ್ತಿ, ಸಂಸ್ಥೆಗಳಿಗೆ ಪಾವತಿ ಮಾಡಲಾಗಿದೆ ಮತ್ತು ಈ ಪಾವತಿಗಳು ಸಾಲವನ್ನು ಪಡೆದ ಉದ್ದೇಶಕ್ಕೆ ಅನುಗುಣವಾಗಿ ಇಲ್ಲ.
ದೇನಾ ಬ್ಯಾಂಕ್‌ನಿಂದ ಪಡೆದ ₹250 ಕೋಟಿಯನ್ನು ನಿಗದಿತ ಉದ್ದೇಶಕ್ಕೆ ಬಳಕೆ ಮಾಡಿಲ್ಲ. ಬಂಡವಾಳ ವೆಚ್ಚಗಳಿಗಾಗಿ ಐಐಎಫ್‌ಸಿಎಲ್‌ನಿಂದ ₹248 ಕೋಟಿ ಸಾಲ ಪಡೆಯಲಾಯಿತು. ‘ದೇನಾ ಬ್ಯಾಂಕ್ ಹಾಗೂ ಐಐಎಫ್‌ಸಿಎಲ್‌ನಿಂದ ಪಡೆದ ಸಾಲವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಂಡಂತೆ, ವಿಶ್ವಾಸಕ್ಕೆ ಚ್ಯುತಿ ತಂದಂತೆ ಕಾಣುತ್ತಿದೆ’ ಎಂದು ವರದಿಯು ಹೇಳಿದೆ.
ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿಯು ದಿವಾಳಿ ಸಂಹಿತೆಯ ಅಡಿಯಲ್ಲಿ ಕಾರ್ಪೊರೇಟ್ ದಿವಾಳಿ ಪರಿಹಾರ ಪ್ರಕ್ರಿಯೆ ಎದುರಿಸುತ್ತಿದೆ. 2019ರ ಜೂನ್ 28ರಿಂದ ಕಂಪನಿಯ ವ್ಯವಹಾರಗಳನ್ನು ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿ ನೇಮಕ ಮಾಡಿರುವ ವೃತ್ತಿಪರ ನೋಡಿಕೊಳ್ಳುತ್ತಿದ್ದಾರೆ.
ಸಹಜ ನ್ಯಾಯದ ಪಾಲನೆ ಆಗಿಲ್ಲ: ಅಂಬಾನಿ ವಕೀಲ
ನವದೆಹಲಿ: ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿಯ ಸಾಲದ ಖಾತೆಯನ್ನು ‘ವಂಚನೆ’ ಎಂದು ವರ್ಗೀಕರಿಸುವುದನ್ನು ವಿರೋಧಿಸಿ ಅನಿಲ್ ಅಂಬಾನಿ ಪರ ವಕೀಲರು ಎಸ್‌ಬಿಐಗೆ ಪತ್ರ ಬರೆದಿದ್ದಾರೆ.
ಎಸ್‌ಬಿಐ ಕ್ರಮವು ಆರ್‌ಬಿಐ ಮಾರ್ಗಸೂಚಿಗಳಿಗೆ ಹಾಗೂ ನ್ಯಾಯಾಲಯದ ನಿರ್ದೇಶನಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಎಸ್‌ಬಿಐ ಈ ನಿರ್ಧಾರವನ್ನು ಸಹಜ ನ್ಯಾಯದ ತತ್ವವನ್ನು ಪಾಲಿಸದೆಯೇ ಕೈಗೊಂಡಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎಸ್‌ಬಿಐ ನೀಡಿದ್ದ ಶೋಕಾಸ್ ನೋಟಿಸ್ ಅಮಾನ್ಯ ಎಂದು ಅನಿಲ್ ಅಂಬಾನಿ ಅವರು ಹೇಳಿರುವುದಕ್ಕೆ ಬ್ಯಾಂಕಿನ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ. ಈಗಿನ ತೀರ್ಮಾನಕ್ಕೆ ಬರಲು ಆಧಾರ ಏನು ಎಂಬುದನ್ನು ತಿಳಿಸಿಲ್ಲ ಎಂದು ವಕೀಲರು ಹೇಳಿದ್ದಾರೆ.
ಕಂಪನಿಯ ಇತರ ಕಾರ್ಯನಿರ್ವಾಹಕೇತರ ನಿರ್ದೇಶಕರಿಗೆ ನೀಡಿದ್ದ ನೋಟಿಸ್‌ಗಳನ್ನು ಎಸ್‌ಬಿಐ ಹಿಂಪಡೆದಿದೆ. ಅನಿಲ್ ಅಂಬಾನಿ ಅವರೂ ಕಾರ್ಯನಿರ್ವಾಹಕೇತರ ನಿರ್ದೇಶಕ ಆಗಿದ್ದರು ಕಂಪನಿಯ ನಿತ್ಯದ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುತ್ತಿರಲಿಲ್ಲ. ಅವರ ವಿಚಾರದಲ್ಲಿ ಈ ಬಗೆಯಲ್ಲಿ ವರ್ಗೀಕರಣ ಮಾಡಿರುವುದು ತಪ್ಪು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.