ADVERTISEMENT

ಲಾಕ್‌ಡೌನ್ | ದೇಶದ ಪ್ರತಿ ಹತ್ತರಲ್ಲಿ ಒಬ್ಬರ ಉದ್ಯೋಗಕ್ಕೆ ಬರಲಿದೆ ಕುತ್ತು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 21:05 IST
Last Updated 28 ಏಪ್ರಿಲ್ 2020, 21:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌-19 ನಿಯಂತ್ರಣ ಉದ್ದೇಶದ ಲಾಕ್‌ಡೌನ್‌ ಕಾರಣಕ್ಕೆ ಉದ್ದಿಮೆ ವಲಯವು ತೀವ್ರ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ದೇಶದ ಪ್ರತಿ 10 ಜನರಲ್ಲಿ ಒಬ್ಬರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಒಟ್ಟಾರೆ ಉದ್ಯೋಗ ಅವಕಾಶಗಳ ಪೈಕಿ ಶೇ 88ರಷ್ಟು ಪಾಲು ಹೊಂದಿರುವ ಅಸಂಘಟಿತ ವಲಯದಲ್ಲಿಯೇ ಬಹುತೇಕ ಉದ್ಯೋಗ ನಷ್ಟ ಕಂಡು ಬರಲಿದೆ. ಸಂಘಟಿತ ವಲಯದ ವ್ಯಾಪ್ತಿಗೆಬರುವ ಔಪಚಾರಿಕ ಉದ್ಯೋಗ ಅವಕಾಶಗಳೂ ಕೆಲಮಟ್ಟಿಗೆ ಕಡಿಮೆಯಾಗಲಿವೆ.

ಸರ್ಕಾರಿ ನೌಕರಿಯಲ್ಲಿ ಇರುವ ಅಂದಾಜು 1 ಕೋಟಿ ಜನರ ಕೆಲಸ ಮಾತ್ರ ಸಂಪೂರ್ಣ ಸುರಕ್ಷಿತವಾಗಿರಲಿದೆ. ಮಾನವ ಸಂಪನ್ಮೂಲ ನಿರ್ವಹಣೆ ಸಂಸ್ಥೆಗಳಿಂದ ‘ಪ್ರಜಾವಾಣಿ’ ಸಂಗ್ರಹಿಸಿದ ದತ್ತಾಂಶಗಳ ವಿಶ್ಲೇಷಣೆಯಲ್ಲಿ ಈ ವಿವರ ತಿಳಿದು ಬಂದಿದೆ.

ADVERTISEMENT

ಇಂಡಿಯನ್‌ ಸ್ಟಾಫಿಂಗ್‌ ಫೆಡರೇಷನ್‌ (ಐಎಸ್‌ಎಫ್‌) ಪ್ರಕಾರ, ದೇಶದ ಒಟ್ಟು 130 ಕೋಟಿ ಜನಸಂಖ್ಯೆಯಲ್ಲಿ 60 ಕೋಟಿ ಜನರು ವಿವಿಧಬಗೆಯ ಉದ್ಯೋಗಗಳಲ್ಲಿ ತೊಡಗಿದ್ದಾರೆ. ‘ಲಾಕ್‌ಡೌನ್‌ ಕಾರಣ ಆರ್ಥಿಕತೆಯ ವಿವಿಧ ವಲಯಗಳ ವಹಿವಾಟು ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿಯೇ ಉದ್ಯೋಗ ನಷ್ಟವಾಗಲಿವೆ. ಮುಂದಿನ 3 ರಿಂದ 6 ತಿಂಗಳಲ್ಲಿ ಸರಾಸರಿ ಶೇ 10ರಷ್ಟು ಕೆಲಸಗಾರರು ತಮ್ಮ ಉದ್ಯೋಗ ಕಳೆದುಕೊಳ್ಳಲಿದ್ದಾರೆ’ ಎಂದು ‘ಐಎಸ್‌ಎಫ್‌’ನ ಅಧ್ಯಕ್ಷ ಲೋಹಿತ್‌ ಭಾಟಿಯಾ ಹೇಳುತ್ತಾರೆ.

ಉದ್ಯೋಗ ಸುರಕ್ಷಿತ: ಬ್ಯಾಂಕಿಂಗ್‌, ಇ–ಕಾಮರ್ಸ್‌, ಐ.ಟಿ, ದೂರಸಂಪರ್ಕ ಕ್ಷೇತ್ರದ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿಲ್ಲ.

ಇ–ಕಾಮರ್ಸ್‌ ಕಂಪನಿಗಳು ದೊಡ್ಡ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳಲಿವೆ. ಬ್ಯಾಂಕ್‌ಗಳೂ ಇದೇ ಹಾದಿಯಲ್ಲಿ ಸಾಗುವ ನಿರೀಕ್ಷೆ ಇದೆ.ದೈತ್ಯ ಐ.ಟಿ ಕಂಪನಿಗಳಾದ ಟಿಸಿಎಸ್‌, ಇನ್ಫೊಸಿಸ್‌ ಮತ್ತು ವಿಪ್ರೊ– ಉದ್ಯೋಗ ಕಡಿತ ಮಾಡುವುದಿಲ್ಲ.

ಭವಿಷ್ಯ ನಿಧಿ, ಗ್ರಾಚ್ಯುಟಿ ಇಲ್ಲವೆ ವಿಮೆ ಮತ್ತಿತರ ಸಾಮಾಜಿಕ ಸುರಕ್ಷತಾ ಸೌಲಭ್ಯಗಳಿಲ್ಲದ ಅಸಂಘಟಿತ ವಲಯದ ಕೆಲಸಗಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.