ADVERTISEMENT

ಆರ್‌ಬಿಐ ನೀತಿ, ರಷ್ಯಾ–ಉಕ್ರೇನ್ ಯುದ್ಧದ ಮೇಲೆ ಮಾರುಕಟ್ಟೆ ಗಮನ

ಪಿಟಿಐ
Published 3 ಏಪ್ರಿಲ್ 2022, 15:13 IST
Last Updated 3 ಏಪ್ರಿಲ್ 2022, 15:13 IST

ನವದೆಹಲಿ (ಪಿಟಿಐ): ದೇಶದ ಆರ್ಥಿಕತೆಗೆ ಸಂಬಂಧಿಸಿದ ಅಂಕಿ–ಅಂಶಗಳು, ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಮತ್ತು ರಷ್ಯಾ–ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದ ಬೆಳವಣಿಗೆಗಳು ಈ ವಾರದಲ್ಲಿ ಷೇರು ಮಾರುಕಟ್ಟೆಯ ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ ಎಂದು ತಜ್ಞರು ಹೇಳಿದ್ದಾರೆ.

ಇವಿಷ್ಟೇ ಅಲ್ಲದೆ, ವಿದೇಶಿ ಸಾಂಸ್ಥಿಕ ಹೂಡಿಕೆ ಹಾಗೂ ಕಚ್ಚಾ ತೈಲ ಬೆಲೆಯ ಏರಿಳಿತಗಳು ಕೂಡ ಪರಿಣಾಮ ಬೀರಲಿವೆ. ‘ಆರ್‌ಬಿಐನ ಹಣಕಾಸು ನೀತಿ ಸಮಿತಿಯ ತೀರ್ಮಾನ ಏಪ್ರಿಲ್ 8ರಂದು ಹೊರಬೀಳಲಿದೆ. ಸೋಮವಾರ ಹಾಗೂ ಬುಧವಾರ ಕ್ರಮವಾಗಿ ತಯಾರಿಕೆ ಮತ್ತು ಸೇವಾ ವಲಯದ ಚಟುವಟಿಕೆಗಳಿಗೆ ಸಂಬಂಧಿಸಿದ ಅಂಕಿ–ಅಂಶಗಳು ‍ಪ್ರಕಟವಾಗಲಿವೆ. ಷೇರು ಮಾರುಕಟ್ಟೆಯ ಗಮನವು ಇವುಗಳ ಮೇಲೆ ಇರಲಿದೆ’ ಎಂದು ಸ್ವಸ್ತಿಕಾ ಇನ್‌ವೆಸ್ಟ್‌ಮಾರ್ಟ್‌ ಲಿಮಿಟೆಡ್‌ನ ಸಂಶೋಧನಾ ಮುಖ್ಯಸ್ಥ ಸಂತೋಷ್ ಮೀನಾ ಹೇಳಿದ್ದಾರೆ.

ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷ ತಿಳಿಯಾಗುವ ಸೂಚನೆಗಳು ಬಂದರೆ ಮಾರುಕಟ್ಟೆಗಳಲ್ಲಿ ಚೇತರಿಕೆ ಕಾಣಿಸಿಕೊಳ್ಳಲಿದೆ ಎಂದು ರೆಲಿಗೇರ್ ಬ್ರೋಕಿಂಗ್‌ನ ಸಂಶೋಧನಾ ವಿಭಾಗದ ಉಪಾಧ್ಯಕ್ಷ ಅಜಿತ್ ಮಿಶ್ರಾ ತಿಳಿಸಿದ್ದಾರೆ. ಮಾರ್ಚ್‌ ತ್ರೈಮಾಸಿಕದ ಫಲಿತಾಂಶಗಳನ್ನು ಕಂಪನಿಗಳು ಪ್ರಕಟಿಸುವ ಪ್ರಕ್ರಿಯೆ ಶುರುವಾಗಲಿರುವ ಕಾರಣ, ನಿರ್ದಿಷ್ಟ ಷೇರುಗಳಲ್ಲಿ ಹೆಚ್ಚಿನ ಚಲನೆ ಕಂಡುಬರಬಹುದು ಎಂದು ಅವರು ಹೇಳಿದ್ದಾರೆ.

ADVERTISEMENT

ಹಿಂದಿನ ವಾರದ ಅವಧಿಯಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,914 ಅಂಶ ಏರಿಕೆ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 517 ಅಂಶ ಏರಿಕೆ ದಾಖಲಿಸಿದೆ. ಹೊಸ ಆರ್ಥಿಕ ವರ್ಷದ ಮೊದಲ ದಿನ (ಶುಕ್ರವಾರ) ಷೇರು ಮಾರುಕಟ್ಟೆಗಳು ಏರಿಕೆ ದಾಖಲಿಸಿವೆ.

2021–22ನೇ ಹಣಕಾಸು ವರ್ಷದಲ್ಲಿ ಸೆನ್ಸೆಕ್ಸ್ 9,059 ಅಂಶ (ಶೇ 18.29ರಷ್ಟು) ಏರಿಕೆ ದಾಖಲಿಸಿದೆ. ನಿಫ್ಟಿ 2,774 ಅಂಶ (ಶೇ 18.88ರಷ್ಟು) ಏರಿಕೆ ಕಂಡಿದೆ.

ಮುಂಬರುವ ದಿನಗಳಲ್ಲಿ ಮಾರುಕಟ್ಟೆಯ ಗಮನವು ಪ್ರಮುಖವಾಗಿ ರಷ್ಯಾ–ಉಕ್ರೇನ್ ಯುದ್ಧ, ಕಚ್ಚಾ ತೈಲ ಬೆಲೆಯಲ್ಲಿನ ಚಲನೆ ಹಾಗೂ ಆರ್‌ಬಿಐ ಹಣಕಾಸು ನೀತಿ ನಿರ್ಧಾರದ ಮೇಲೆ ಇರಲಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.