ನವದೆಹಲಿ: ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ 2024-25ರ ಹಣಕಾಸು ವರ್ಷದಲ್ಲಿ ದೇಶಕ್ಕೆ ಬಂದ ವಿದೇಶಿ ನೇರ ಹೂಡಿಕೆಯ(ಎಫ್‌ಡಿಐ) ಒಳಹರಿವಿನ ಪೈಕಿ ಶೇ 51ರಷ್ಟು ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಬಂದಿದೆ.
2024-25ರ ಏಪ್ರಿಲ್-ಮಾರ್ಚ್ ಅವಧಿಯಲ್ಲಿ ಮಹಾರಾಷ್ಟ್ರವು ಗರಿಷ್ಠ 19.6 ಬಿಲಿಯನ್ ಡಾಲರ್(ಸುಮಾರು ₹16,81 ಲಕ್ಷ ಕೋಟಿ) ವಿದೇಶಿ ಒಳಹರಿವನ್ನು ಆಕರ್ಷಿಸಿದೆ. ಇದು ದೇಶದ ಒಟ್ಟು ಎಫ್‌ಡಿಐನ ಶೇ 31 ರಷ್ಟಿದೆ.
ಕಳೆದ ಹಣಕಾಸು ವರ್ಷದಲ್ಲಿ ಕರ್ನಾಟಕವು 6.62 ಬಿಲಿಯನ್ ಡಾಲರ್(ಸುಮಾರು ₹5,67 ಲಕ್ಷ ಕೋಟಿ) ವಿದೇಶಿ ಹೂಡಿಕೆಗಳನ್ನು ಪಡೆದಿದೆ ಎಂದು ದತ್ತಾಂಶವು ತೋರಿಸಿದೆ.
ಉಳಿದಂತೆ, ದೆಹಲಿ( 6 ಬಿಲಿಯನ್ ಡಾಲರ್), ಗುಜರಾತ್(5.71 ಬಿಲಿಯನ್ ಡಾಲರ್), ತಮಿಳುನಾಡು( 3.68 ಬಿಲಿಯನ್ ಡಾಲರ್), ಹರಿಯಾಣ( 3.14 ಬಿಲಿಯನ್ ಡಾಲರ್), ತೆಲಂಗಾಣ ( 3 ಬಿಲಿಯನ್ ಡಾಲರ್) ಹೂಡಿಕೆ ಆಕರ್ಷಿಸಿವೆ.
ಮೂಲಸೌಕರ್ಯದಲ್ಲಿ ಗಣನೀಯ ಸುಧಾರಣೆ ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಎಫ್‌ಡಿಐನಲ್ಲಿ ಸಿಂಹಪಾಲು ಹರಿದು ಬರಲು ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಹಣಕಾಸು ವರ್ಷದಲ್ಲಿ ಈಕ್ವಿಟಿ ಒಳಹರಿವು, ಗಳಿಕೆಯ ಮರುಹೂಡಿಕೆ ಮತ್ತು ಇತರ ಬಂಡವಾಳವನ್ನು ಒಳಗೊಂಡಿರುವ ಒಟ್ಟು ಎಫ್‌ಡಿಐ ಶೇ 14ರಷ್ಟು ಹೆಚ್ಚಾಗಿ 81.04 ಬಿಲಿಯನ್ ಅಮೆರಿಕನ್ ಡಾಲರ್‌ಗೆ ತಲುಪಿದೆ. ಇದು ಕಳೆದ ಮೂರು ವರ್ಷಗಳಲ್ಲೇ ಅತಿ ಹೆಚ್ಚಾಗಿದೆ. 2023-24ರಲ್ಲಿ ಎಫ್‌ಡಿಐ 71.3 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.