
ಬೆಂಗಳೂರು: ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಈ ವರ್ಷದ ಡಿಸೆಂಬರ್‌ವರೆಗೂ ವೀಸಾ ರದ್ದುಪಡಿಸಿದ್ದು, ಸುಮಾರು 21 ಲಕ್ಷ ಮಂದಿ ಭಾರತೀಯರು ಈ ವರ್ಷ ಮಲೇಷ್ಯಾಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮಲೇಷ್ಯಾದ ಪ್ರವಾಸೋದ್ಯಮ ಇಲಾಖೆ ಅಂದಾಜಿಸಿದೆ.
ಭಾರತ, ಚೀನಾ, ಆಸಿಯಾನ್ ಮತ್ತಿತರ ದೇಶಗಳಿಂದ ಮಲೇಷ್ಯಾಗೆ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ವೀಸಾ ರದ್ದುಪಡಿಸಲಾಗಿದೆ ಎಂದು ಮಲೇಷ್ಯಾದ ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷ ಡಿ. ಮನೋಹರನ್ ಅವರು ತಿಳಿಸಿದ್ದಾರೆ.
ಭಾರತದಿಂದ 2025ರಲ್ಲಿ ಸುಮಾರು 15.65 ಲಕ್ಷ ಹಾಗೂ 2024ರಲ್ಲಿ 13.65 ಲಕ್ಷ ಮಂದಿ ಪ್ರವಾಸಿಗರು ಮಲೇಷ್ಯಾಗೆ ಬಂದಿದ್ದರು. 2014ಕ್ಕೆ ಹೋಲಿಸಿದರೆ ಕಳೆದ ವರ್ಷ ಪ್ರವಾಸಿಗರ ಸಂಖ್ಯೆ ಶೇ 14.6ರಷ್ಟು ಹೆಚ್ಚಾಗಿದೆ. ಈ ವರ್ಷ ಭಾರತದಿಂದ ಬರುವ ಪ್ರವಾಸಿಗರ ಸಂಖ್ಯೆ 21 ಲಕ್ಷಕ್ಕೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.
ಬೆಂಗಳೂರಿನಿಂದ ವಾರದಲ್ಲಿ 30 ವಿಮಾನಗಳು ಮಲೇಷ್ಯಾಗೆ ಸಂಚರಿಸುತ್ತವೆ. ರಜಾ ದಿನಗಳನ್ನು ಕಳೆಯಲು, ಮದುವೆ ಸಮಾರಂಭಗಳನ್ನು ಆಯೋಜಿಸಲು ಮಲೇಷ್ಯಾದ ಪ್ರವಾಸಿ ತಾಣಗಳಲ್ಲಿ ಅವಕಾಶವಿದೆ. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಮಲೇಷ್ಯಾದ ಪ್ರವಾಸೋದ್ಯಮ ಇಲಾಖೆ ಮತ್ತು ಮಲೇಷ್ಯಾದ ಅಸೋಸಿಯೇಷನ್ ಆಫ್ ಟೂರ್ ಅಂಡ್ ಟ್ರಾವೆಲ್ ಏಜೆಂಟ್ಸ್ ಸಹಭಾಗಿತ್ವದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ‘ಸೇಲ್ಸ್ ಮಿಷನ್ 2026ʼ ಕಾರ್ಯಕ್ರಮ ಯಶಸ್ವಿಯಾಯಿತು ಎಂದು ಅವರು ತಿಳಿಸಿದ್ದಾರೆ.
ಚೆನ್ನೈನಲ್ಲಿರುವ ಮಲೇಷ್ಯಾದ ಕಾನ್ಸುಲ್ ಜನರಲ್ ಕೆ.ಸರವಣ ಕುಮಾರ್ ಮಾತನಾಡಿ, ಮಲೇಷ್ಯಾ ಮತ್ತು ಭಾರತ ನಡುವಿನ ಸಂಬಂಧ ವೃದ್ಧಿಸುವಲ್ಲಿ ಪ್ರವಾಸೋದ್ಯಮದ ಪಾತ್ರ ಪ್ರಮುಖವಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.