ADVERTISEMENT

ಏಳು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ತಯಾರಿಕಾ ವಲಯದ ಚಟುವಟಿಕೆ

ಪಿಟಿಐ
Published 5 ಏಪ್ರಿಲ್ 2021, 12:19 IST
Last Updated 5 ಏಪ್ರಿಲ್ 2021, 12:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ತಯಾರಿಕಾ ವಲಯದ ಚಟುವಟಿಕೆಗಳು ಮಾರ್ಚ್‌ನಲ್ಲಿ ಇಳಿಕೆ ಕಂಡಿವೆ. ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಫೆಬ್ರುವರಿಯಲ್ಲಿ 57.5ರಷ್ಟಿತ್ತು. ಮಾರ್ಚ್‌ನಲ್ಲಿ ಇದು 55.4ಕ್ಕೆ ಇಳಿಕೆಯಾಗಿದೆ. ಏಳು ತಿಂಗಳ ಕನಿಷ್ಠ ಮಟ್ಟದ ಬೆಳವಣಿಗೆ ಇದಾಗಿದೆ.

ಕೊರೊನಾ ಸೋಂಕು ಹರಡುವಿಕೆ ಮತ್ತೆ ಹೆಚ್ಚಾಗುತ್ತಿರುವುದರಿಂದ ಬೇಡಿಕೆ ಮೇಲೆ ಪರಿಣಾಮ ಉಂಟಾಗಿದೆ. ಇದರಿಂದಾಗಿ ತಯಾರಿಕಾ ವಲಯದ ಬೆಳವಣಿಗೆ ಕುಸಿಯುವಂತಾಗಿದೆ ಎಂದು ಐಎಚ್‌ಎಸ್‌ ಮರ್ಕಿಟ್‌ ಸಂಸ್ಥೆ ತಿಳಿಸಿದೆ. ಹೀಗಿದ್ದರೂ 50ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇರುವುದರಿಂದ ಬೆಳವಣಿಗೆಯುಸಕಾರಾತ್ಮಕ ಮಟ್ಟದಲ್ಲಿ ಇದೆ ಎಂದು ಅದು ಹೇಳಿದೆ.

ಕೋವಿಡ್‌–19ಕ್ಕೆ ಸಂಬಂಧಿಸಿದ ನಿರ್ಬಂಧಗಳ ವಿಸ್ತರಣೆ ಹಾಗೂ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್‌ ಕ್ರಮಗಳು ಮತ್ತೆ ಜಾರಿಗೆ ಬಂದಿರುವುದರಿಂದ ಭಾರತದ ತಯಾರಕರು ಏಪ್ರಿಲ್‌ನಲ್ಲಿ ಇನ್ನಷ್ಟು ಸವಾಲುಗಳನ್ನು ಎದುರಿಸಬೇಕಾಗಲಿದೆ ಎಂದುಐಎಚ್‌ಎಸ್‌ ಮರ್ಕಿಟ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ ಲಿಮಾ ತಿಳಿಸಿದ್ದಾರೆ.

ADVERTISEMENT

ವ್ಯಾಪಾರ ನಡೆಸುವುದಕ್ಕೆ ಸಂಬಂಧಿಸಿದ ವಿಶ್ವಾಸವು ಮಾರ್ಚ್‌ನಲ್ಲಿ ಕುಗ್ಗಿದೆ. ಮುಂಬರುವ 12 ತಿಂಗಳುಗಳಲ್ಲಿ ಉತ್ಪಾದನೆಯಲ್ಲಿ ಬೆಳವಣಿಗೆ ಕಾಣಲಿದೆ ಎಂದು ಕೆಲವು ಕಂಪನಿಗಳು ಅಂದಾಜು ಮಾಡಿದ್ದರೆ, ಸದ್ಯ ಇರುವ ಮಟ್ಟದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಹೆಚ್ಚಿನ ಕಂಪನಿಗಳು ಅಭಿಪ್ರಾಯಪಟ್ಟಿವೆ.

ತಯಾರಿಕಾ ವೆಚ್ಚದ ಏರಿಕೆಯು ಮೂರು ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ಆದರೆ, ಸ್ಪರ್ಧಾತ್ಮಕತೆ ಕಾಯ್ದುಕೊಳ್ಳಲು ಹಾಗೂ ಮಾರಾಟ ಹೆಚ್ಚಿಸಲು ಕಂಪನಿಗಳು ಮಾರಾಟ ದರವನ್ನು ಅಲ್ಪ ಪ್ರಮಾಣದಲ್ಲಷ್ಟೇ ಹೆಚ್ಚಿಸಿವೆ ಎಂದು ಸಂಸ್ಥೆಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.