ADVERTISEMENT

ತಯಾರಿಕಾ ವಲಯದ ಪ್ರಗತಿ ಇಳಿಕೆ: ಸಮೀಕ್ಷೆ ವರದಿ

ಪಿಟಿಐ
Published 1 ಡಿಸೆಂಬರ್ 2025, 15:25 IST
Last Updated 1 ಡಿಸೆಂಬರ್ 2025, 15:25 IST
ತಯಾರಿಕಾ ವಲಯ
ತಯಾರಿಕಾ ವಲಯ   

ನವದೆಹಲಿ: ‘ದೇಶದ ತಯಾರಿಕಾ ವಲಯದ ಬೆಳವಣಿಗೆ ನವೆಂಬರ್‌ ತಿಂಗಳಿನಲ್ಲಿ 9 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಆಗಿದೆ’ ಎಂದು ಎಸ್‌ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ಸಮೀಕ್ಷೆ ವರದಿ ಸೋಮವಾರ ತಿಳಿಸಿದೆ.

ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆಯು ನಿರ್ವಹಿಸುವ ‘ಎಚ್‌ಎಸ್‌ಬಿಸಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್‌ ಸೂಚ್ಯಂಕ’ವು (ಪಿಎಂಐ) ಅಕ್ಟೋಬರ್‌ನಲ್ಲಿ 59.2ರಷ್ಟಿತ್ತು. ಆದರೆ, ನವೆಂಬರ್‌ನಲ್ಲಿ 56.6ಕ್ಕೆ ಇಳಿದಿದೆ. ಮಾರಾಟ ಮತ್ತು ಉತ್ಪಾದನೆಯಲ್ಲಿನ ಮಂದಗತಿಯೇ ಸೂಚ್ಯಂಕ ಇಳಿಕೆಗೆ ಕಾರಣ ಎಂದು ಹೇಳಿದೆ.

ಈ ಸೂಚ್ಯಂಕವು 50ರ ಮೇಲಿದ್ದರೆ ಸಕಾರಾತ್ಮಕ ಬೆಳವಣಿಗೆ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ನಕಾರಾತ್ಮಕ ಪ್ರಗತಿ ಎಂದು ಅರ್ಥೈಸಲಾಗುತ್ತದೆ. 

ADVERTISEMENT

‘ಅಮೆರಿಕದ ಹೆಚ್ಚುವರಿ ಸುಂಕ ಹೇರಿಕೆಯು ದೇಶದ ತಯಾರಿಕಾ ವಲಯದ ಮೇಲೆ ಪರಿಣಾಮ ಬೀರಿದೆ. ಇದರಿಂದ ವಲಯದ ಚಟುವಟಿಕೆ ನಿಧಾನವಾಗಿದೆ’ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಾಂಜುಲ್ ಭಂಡಾರಿ ಹೇಳಿದ್ದಾರೆ.

ಆಫ್ರಿಕಾ, ಏಷ್ಯಾ, ಯುರೋಪ್‌ ಮತ್ತು ಪಶ್ಚಿಮ ಏಷ್ಯಾಕ್ಕೆ ದೇಶದ ರಫ್ತು ಉತ್ತಮವಾಗಿದ್ದರೂ, ಒಟ್ಟಾರೆ ಬೆಳವಣಿಗೆಯಲ್ಲಿ ಇಳಿಕೆ ಕಂಡಿದೆ ಎಂದು ವರದಿ ತಿಳಿಸಿದೆ.

ಸರಕುಗಳಿಗೆ ಹೊಸ ರಫ್ತು ಕಾರ್ಯಾದೇಶ 13 ತಿಂಗಳ ಕನಿಷ್ಠ ಮಟ್ಟಕ್ಕೆ ದಾಖಲಾಗಿದೆ. ಇದು ಸುಂಕದ ಪರಿಣಾಮದ ಬಗ್ಗೆ ಹೆಚ್ಚುತ್ತಿರುವ ಕಳವಳವನ್ನು ಪ್ರತಿಬಿಂಬಿಸುತ್ತಿದೆ. ಹೊಸ ಕಾರ್ಯಾದೇಶ ಕಡಿಮೆ ಆಗಿದ್ದರಿಂದ ಕಂಪನಿಗಳು ನೇಮಕಾತಿ ಚಟುವಟಿಕೆಯನ್ನು ನಿಧಾನಗೊಳಿಸಿದವು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.