ADVERTISEMENT

ಹೂಡಿಕೆದಾರರಿಗೆ ಶುಕ್ರದೆಸೆ ತಂದ 2023–24: ₹128 ಲಕ್ಷ ಕೋಟಿ ಸಂಪತ್ತು ಗಳಿಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 15:25 IST
Last Updated 28 ಮಾರ್ಚ್ 2024, 15:25 IST
ಷೇರುಪೇಟೆಗೆ ಬಜೆಟ್‌ ಏಟು: ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ₹4.6 ಲಕ್ಷ ಕೋಟಿ ಇಳಿಕೆ
ಷೇರುಪೇಟೆಗೆ ಬಜೆಟ್‌ ಏಟು: ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ₹4.6 ಲಕ್ಷ ಕೋಟಿ ಇಳಿಕೆ   

ನವದೆಹಲಿ: 2023–24ನೇ ಆರ್ಥಿಕ ವರ್ಷವು ಹೂಡಿಕೆದಾರರಿಗೆ ಶುಕ್ರದೆಸೆ ತಂದಿದ್ದು, ಅವರ ಸಂಪತ್ತು ₹128.77 ಲಕ್ಷ ಕೋಟಿಯಷ್ಟು ವೃದ್ಧಿಸಿದೆ. 

2022–23ನೇ ಹಣಕಾಸು ವರ್ಷದಲ್ಲಿ ಭಾರತೀಯ ಷೇರುಪೇಟೆಗಳ ಹೊಳಪು ಮಂದವಾಗಿತ್ತು. ಹೂಡಿಕೆದಾರರಿಗೆ ನಿರೀಕ್ಷಿತಮಟ್ಟದಲ್ಲಿ ಆದಾಯ ಲಭಿಸಿರಲಿಲ್ಲ.

‘ಆದರೆ, ಈ ಹಣಕಾಸು ವರ್ಷವು ಆದಾಯದ ಏರಿಕೆಯ ಜೊತೆಗೆ ದೇಶದ ಆರ್ಥಿಕತೆ ಬೆಳವಣಿಗೆಗೂ ಕೊಡುಗೆ ನೀಡಿದೆ. ಹೂಡಿಕೆಯ ಒಳಹರಿವು ಹೆಚ್ಚಿದ್ದು ಕಾರ್ಪೊರೇಟ್ ವಲಯದ ಆದಾಯ ಹೆಚ್ಚಳವೂ ಆಶಾದಾಯಕವಾಗಿದೆ’ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ADVERTISEMENT

2023–24ರ ಹಣಕಾಸು ವರ್ಷದಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 14,659 ಅಂಶ (ಶೇ 24.85) ಏರಿಕೆ ಕಂಡಿದೆ. ಮಾರ್ಚ್‌ 7ರಂದು 74,245 ಅಂಶಗಳಿಗೆ ಮುಟ್ಟುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿತ್ತು. 

‘ಜಾಗತಿಕ ಆರ್ಥಿಕ ಹಿಂಜರಿಕೆ ಆತಂಕ, ಹಣದುಬ್ಬರ ಮತ್ತು ಬಡ್ಡಿದರ ಏರಿಕೆಯ ನಡುವೆಯೂ ಷೇರುಪೇಟೆಗಳು ಚೇತರಿಕೆ ಕಂಡಿವೆ. ಜಾಗತಿಕ ಬಿಕ್ಕಟ್ಟಿನಿಂದಾಗಿ ಕೆಲವೊಮ್ಮೆ ಹಿನ್ನಡೆ ಅನುಭವಿಸಿದರೂ ಮತ್ತೆ ದೃಢತೆ ಸಾಧಿಸಿವೆ’ ಎಂದು ಸ್ವಸ್ತಿಕ್‌ ಇನ್‌ವೆಸ್ಟ್‌ಮೆಂಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸುನಿಲ್‌ ನ್ಯಾತಿ ಹೇಳಿದ್ದಾರೆ.‌

ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಬಂಡವಾಳವು (ಎಂ–ಕ್ಯಾಪ್‌) ₹1.28 ಲಕ್ಷ ಕೋಟಿಯಿಂದ ₹3.86 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. 

ಮಾರ್ಚ್‌ 2ರಂದು ಈ ಕಂಪನಿಗಳ ಒಟ್ಟು ಎಂ–ಕ್ಯಾಪ್‌ ₹394 ಲಕ್ಷ ಕೋಟಿಗೆ ಮುಟ್ಟಿತ್ತು. ರಿಲಯನ್ಸ್‌ ಇಂಡಸ್ಟ್ರೀಸ್‌ ದೇಶೀಯವಾಗಿ ಅತ್ಯಂತ ಮೌಲ್ಯಯುತ ಕಂಪನಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

2022–23ರಲ್ಲಿ ಬಿಎಸ್‌ಇ ಗುಚ್ಛದಲ್ಲಿರುವ ಕಂಪನಿಗಳ ಒಟ್ಟು ಎಂ–ಕ್ಯಾಪ್‌ ₹5.86 ಲಕ್ಷ ಕೋಟಿಯಿಂದ ₹2.58 ಲಕ್ಷ ಕೋಟಿಗೆ ಇಳಿಕೆಯಾಗಿತ್ತು. ಆ ವರ್ಷ ಸೆನ್ಸೆಕ್ಸ್‌ 423 ಅಂಶಗಳಷ್ಟೇ (ಶೇ 0.72) ಏರಿಕೆ ಕಂಡಿತ್ತು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.